

ಮಂಗಳೂರು: ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡಾ ಕಳೆದ ಎರಡು ತಿಂಗಳುಗಳಿಂದ ಸರಬರಾಜು ಮಾಡದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ನಗರದ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಎಚ್ಚರಿಸಿದರು.
ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಹಾಗೂ ಖಾಲಿ ಇರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಆಗ್ರಹಿಸಿ ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪಾಲಿಕೆಯ ನಗರ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗಿ ಲಾಭಿಗೆ ಮಣಿದಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ನಗರ ಆರೋಗ್ಯ ಕೇಂದ್ರ ಇಂದು ನರಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಇನ್ನು ಸ್ಮಾರ್ಟ್ ಸಿಟಿ ಹೆಸರಲ್ಲಿ ನಗರದ ಎಲ್ಲ ರಸ್ತೆಗಳನ್ನು ಅಗೆದು ಕಾಂಕ್ರೀಟಿಕರಣ ನಡೆಸಿ ಕಮಿಷನ್ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಬಿಜೆಪಿ ಆಡಳಿತಕ್ಕೆ ನಗರ ಆರೋಗ್ಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೆ? ಎಂದು ಪ್ರಶ್ನಿಸಿದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಸಾಮರಸ್ಯ ಮಂಗಳೂರು ಇದರ ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು.