ಸಿಪಿಐಎಂ ಪರ್ಯಾಯ ರಾಜಕೀಯ ಶಕ್ತಿ

3 mlv 3
ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿಪಿಐಎಂ ಪಕ್ಷದ ಹೋಬಳಿ ಮಟ್ಟದ ಶಾಖಾ ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್.ಭರತ್ ರಾಜ್ ಮಾತನಾಡಿದರು. ಎನ್.ಲಿಂಗರಾಜಮೂರ್ತಿ, ಗುರುಸ್ವಾಮಿ, ಮಲ್ಲಿಕ್ಯಾತ್ನಳ್ಳಿ ವಿಷಕಂಠ, ಕಿರುಗಸೂರು ಸಿದ್ದರಾಜು, ಕಾಂತರಾಜು ಇದ್ದರು.
Published on

ಮಳವಳ್ಳಿ: ಬಂಡವಾಳಶಾಹಿ ರಾಜಕೀಯ ಪ್ರಭುತ್ವ ಕಿತ್ತುಹಾಕಿ ದುಡಿಯುವ ರೈತ ಕಾರ್ಮಿಕರ ಪರವಾದ ಆಡಳಿತದಿಂದ ದೇಶದ ಜನರು ಸಮೃದ್ಧಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕಾದರೆ ಸಿಪಿಐಎಂ ಪಕ್ಷವೇ ದೇಶಕ್ಕೆ ಪರ್ಯಾಯ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್.ಭರತ್‌ರಾಜ್ ತಿಳಿಸಿದರು.


ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಗುರುವಾರ ಸಿಪಿಐ(ಎಂ)ಶಾಖಾ ಸಮ್ಮೇಳನದ ಭಾಗವಾಗಿ ಆಯೋಜಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರೃ ನಂತರ ದೇಶದಲ್ಲಿ ಆಳ್ವಿಕೆ ನಡೆಸಿದ ಬಂಡವಾಳಶಾಹಿ ರಾಜಕೀಯ ಪಕ್ಷಗಳು ಆರ್ಥಿಕ ಬಲಾಢ್ಯರು ಹಾಗೂ ಭೂ ಮಾಲೀಕರ ಹಿತ ಕಾಪಾಡಿಕೊಂಡು ಬರುತ್ತಿವೆ. ಹೀಗಾಗಿ ದೇಶದಲ್ಲಿ ಬಡತನ, ನಿರುದ್ಯೋಗ, ಅಸಮಾನತೆ ತೊಲಗಿಸಲು ಸಾಧ್ಯವಿಲ್ಲ ಎಂದರು.
ಸ್ವಾತಂತ್ರೃ ಚಳವಳಿಯಲ್ಲಿ ತ್ಯಾಗಜೀವಿಗಳು ಮಾಡಿದ ಸೇವೆ, ಬಲಿದಾನದ ಮೂಲಕ ಗಳಿಸಿದ ಸ್ವಾತಂತ್ರೃದ ಆಶಯ ಮತ್ತು ದೇಶ ಪ್ರೇಮಿಗಳು ಕಂಡ ಕನಸು ನನಸಾಗದೆ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ದುಡಿಯುವ ವರ್ಗದ ರೈತ, ಕೂಲಿ ಕಾರ್ಮಿಕರ ಪರವಾದ ಆಡಳಿತಕ್ಕಾಗಿ ಮತದಾರರು ಸಿಪಿಎಂ ಪಕ್ಷ ಬೆಂಬಲಿಸಿ ಬೆಳೆಸಬೇಕಿದೆ. ಏಕೆಂದರೆ ಸಿಪಿಎಂ ಆಡಳಿತದಲ್ಲಿ ಆರೋಗ್ಯ, ಶಿಕ್ಷಣ, ಬಡವರ ನಿವೇಶನ, ವಸತಿಗೆ ಆದ್ಯತೆ ನೀಡುವುದರ ಜತೆಗೆ ಸುರಕ್ಷಿತ ಆಹಾರ ಸೇವನೆಗೂ ಕಾಳಜಿ ವಹಿಸಲಾಗುತ್ತದೆ. ಇದಕ್ಕೆ ಮಾದರಿ ಕೇರಳ ರಾಜ್ಯವಾಗಿದ್ದು, ಇಲ್ಲಿ ಸಿಪಿಎಂ ಪಕ್ಷ ಅಧಿಕಾರ ನಡೆಸುತ್ತಾ ಇಡೀ ದೇಶದಲ್ಲೇ ಉತ್ತಮ ಆಡಳಿತದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.


ಜಿಲ್ಲಾ ಸಮಿತಿ ಸದಸ್ಯ ಜಿ. ರಾಮಕೃಷ್ಣ ಮಾತನಾಡಿ, ಧರ್ಮ, ಜಾತಿ ಆಧಾರದಲ್ಲಿ ದೇಶ ವಿಭಜಿಸಲು ಸಾಧ್ಯ ಇಲ್ಲ. ಭಾರತ ಜಾತ್ಯತೀತ ರಾಷ್ಟ್ರ. ಹಾಗಾಗಿ ನಾವು ಶಾಂತ, ಸೌಹಾರ್ದದಿಂದ ಬಾಳಬೇಕು ಎಂದರು.

ಜಿಲ್ಲಾ ಸಮಿತಿ ಸದಸ್ಯ ಎನ್.ಲಿಂಗರಾಜಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಮಿತಿ ಸದಸ್ಯರಾದ ಗುರುಸ್ವಾಮಿ, ಮಲ್ಲಿಕ್ಯಾತ್ನಳ್ಳಿ ವಿಷಕಂಠ, ಕಿರುಗಸೂರು ಸಿದ್ದರಾಜು, ನಿವೃತ್ತ ಶಿಕ್ಷಕ ಕಾಂತರಾಜು, ಧ್ರುವ, ಮಹಾದೇವು, ರಘುಸ್ವಾಮಿ. ವೆಂಕಟಯ್ಯ, ದ್ಯಾವಪಟ್ಟಣ ನಾಗಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net