

ಸಿಂಧನೂರು: ಶ್ರಮಿಕರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಅವಿರತ ಹೋರಾಟ ನಡೆಯಬೇಕಾಗಿದೆ ಸಿಪಿಐ(ಎಂಎಲ್) ತಾಲೂಕು ಕಾರ್ಯದರ್ಶಿ ಶೇಕ್ಷಖಾದ್ರಿ ಹೇಳಿದರು.
ನಗರದ ಶ್ರಮಿಕರ ಭವನದಲ್ಲಿ ಬುಧವಾರ 12ನೇ ಸಿಪಿಐ(ಎಂ) ಪಕ್ಷದ ತಾಲೂಕು ಸಮ್ಮೇಳನದಲ್ಲಿ ಮಾತನಾಡಿದರು.
ಸಾಮಾಜಿಕ ಸಮಾನತೆ ತತ್ವದಲ್ಲಿ ಪಕ್ಷ ಕೆಲಸ ನಿರ್ವಹಿಸುತ್ತಿದೆ. ಸಂವಿಧಾನಾತ್ಮಕ ಹಕ್ಕು ಪಡೆದುಕೊಳ್ಳಲು, ಉದ್ಯೋಗ ಮತ್ತು ಆಹಾರ ಭದ್ರತೆಗಾಗಿ ಪಕ್ಷ ಹಿಂದಿನಿಂದಲೂ ಹೋರಾಟ ನಡೆಸಿದೆ. ಮೌಢ್ಯಗಳನ್ನು ತೊಲಗಿಸಿ, ಆರ್ಥಿಕ ಸಮಾನತೆ ಹೊಂದಲು ಬಡವರೊಂದಿಗೆ ಪಕ್ಷ ನಿರಂತರ ಸಂಪರ್ಕ ಹೊಂದಿದೆ ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ ಮಾತನಾಡಿ, ಕಾರ್ಮಿಕರ ಮೂಲ ಹಕ್ಕುಗಳು ಹಾಗೂ ಹೋರಾಟದ ರೂಪರೇಷಗಳನ್ನು ವಿವರಿಸಿದರು. ಸಮ್ಮೇಳನದ ಧ್ವಜಾರೋಹಣವನ್ನು ಪಕ್ಷದ ಸದಸ್ಯ ನರಸಿಂಹಪ್ಪ ನೆರವೇರಿಸಿದರು. ನಂತರ ಪ್ರತಿನಿಧಿ ಗಳು ವರದಿಯ ಮೇಲೆ ಚರ್ಚೆ ಮಾಡಿದರು. ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಪ್ರಮುಖರಾದ ರೇಣುಕಮ್ಮ.ಕೆ., ಶರಬಣ್ಣ ನಾಗಲಾಪುರ, ಎಂ. ಗೋಪಾಲಕೃಷ್ಣ ಇದ್ದರು.
ಪದಾಧಿಕಾರಿಗಳ ಆಯ್ಕೆ: ಸಿಪಿಐ(ಎಂ) ನೂತನ ಸಮಿತಿಗೆ ಕಾರ್ಯದರ್ಶಿಯಾಗಿ ಬಸವಂತರಾಯಗೌಡ ಹಾಗೂ ಸದಸ್ಯರನ್ನಾಗಿ ಎಸ್. ದೇವೇಂದ್ರ ಗೌಡ, ರೇಣುಕಮ್ಮ.ಕೆ, ಯಂಕಪ್ಪ ಕೆಂಗಲ್, ಶರಣಮ್ಮ ಪಾಟೀಲ, ಗೇಸುದ್‌ರಾಜ್ ಮಕಾಂದಾರ,ಗರಿಬ್ ಸಾಬ್ ಕೊಡ್ಲಿ, ಬಂಡಾರೆಪ್ಪ ತುರ್ವಿಹಾಳ, ವೀರೇಶ ನಾಯಕ ತುರ್ವಿಹಾಳ ಅವರನ್ನು ಆಯ್ಕೆ ಮಾಡಲಾಯಿತು.