ನಿವೇಶನ ನೀಡುವಂತೆ ಸಿಪಿಐ ಪ್ರತಿಭಟನೆ

2 ckm 5
ಚಿಕ್ಕಮಗಳೂರು ತಾಲೂಕು ಕಡಬಗೆರೆ ನಾಡಕಚೇರಿ ಎದುರು ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಸಿಪಿಐ ಕಾರ್ಯಕರ್ತರು ಜನಸಾಮಾನ್ಯರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ನಿವೇಶನ ರಹಿತರಿಗೆ ಕೂಡಲೇ ನಿವೇಶನ ಒದಗಿಸಿ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕೆರೆಮಕ್ಕಿ ರಮೇಶ್, ಜಿ.ರಘು, ವಿಜಯಕುಮಾರ್, ಕಳಸಪ್ಪ, ಜಾರ್ಜ್ ಅಗಸ್ಟಿನ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜನಸಾಮಾನ್ಯರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ನಿವೇಶನ ರಹಿತರಿಗೆ ಕೂಡಲೇ ನಿವೇಶನ ಒದಗಿಸಿ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಸೋಮವಾರ ತಾಲೂಕಿನ ಕಡಬಗೆರೆ ಗ್ರಾಮದ ಮುಖ್ಯರಸ್ತೆಯಿಂದ ನಾಡ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಖಾಂಡ್ಯ, ಹೋಬಳಿಯ ಕೆಲವು ಗ್ರಾಪಂಗಳಲ್ಲಿ ವಸತಿ ರಹಿತರ ಪಟ್ಟಿಯನ್ನು ಒಂದೆಡೆ ತಯಾರಿಸಿಲ್ಲ. ಇನ್ನೊಂದೆಡೆ ಹೆಸರಿರುವ ವಸತಿ ರಹಿತರಿಗೆ ನಿವೇಶನ ನೀಡಲು ಜಾಗ ಗುರುತು ಮಾಡದೇ ಬಹಳಷ್ಟು ಕುಟುಂಬಗಳು ವಸತಿಯಿಲ್ಲದೇ ನಿರ್ಗತಿಕರಾಗಿದ್ದಾರೆ ಎಂದು ದೂರಿದರು.
ಫಾರಂ ನಂ. ೯೪ಸಿಯಡಿ ಭೂಮಿಗಾಗಿ ಅರ್ಜಿ ಸಲ್ಲಿರುವ ಅನೇಕ ಕುಟುಂಬಗಳಿAದ ಸರ್ಕಾರ ಸರ್ವೇ ನಡೆಸಿ ಮಂಜೂರಾತಿ ಹಣ ಕಟ್ಟಿಸಿಕೊಂಡಿದೆ. ಆದರೆ ಹಲವಾರು ಕುಟುಂಬಗಳಿಗೆ ಹಕ್ಕುಪತ್ರ ನೀಡದೇ ಇರುವುದು ಸರ್ಕಾರದ ಅಸಡ್ಡೆ ಧೋರಣೆ ಎತ್ತಿ ತೋರಿಸುತ್ತಿದೆ. ಆ ನಿಟ್ಟಿನಲ್ಲಿ ಕೂಡಲೇ ಶಾಸಕರು ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಜೀವನೋಪಾಯಕ್ಕಾಗಿ ಕಾಫಿ, ಅಡಕೆ ಸೇರಿದಂತೆ ಮುಂತಾದ ಬೆಳೆಗಳನ್ನು ಅವಲಂಭಿಸಿರುವ ಬಡ ಕೃಷಿಕರ ಜಮೀನುಗಳಿಗೆ ಅರಣ್ಯ ಇಲಾಖೆಯು ಒತ್ತುವರಿ ತೆರವಿನ ಹೆಸರಿನಲ್ಲಿ ಏಕಾಏಕಿ ದಾಳಿ ನಡೆಸಿ ಫಸಲು ಮತ್ತು ಬೆಳೆಗಳನ್ನು ನಾಶಗೊಳಿಸಲಾಗುತ್ತಿದೆ. ಇದರಿಂದ ಕೃಷಿಯನ್ನೇ ನಂಬಿರುವ ಬಡಕೃಷಿಕರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಹೇಳಿದರು.
ಪ್ರಸ್ತುತ ಆರ್ಥಿಕ ಸ್ಥಿತಿಗತಿನುಸಾರ ಬಿಪಿಎಲ್ ಕಾರ್ಡ್ದಾರರಿಗೆ ಆದಾಯದ ಮಾನದಂಡಗಳನ್ನು ೧ ಲಕ್ಷ ದಿಂದ ೨ ಲಕ್ಷ ರೂ.ಗೆ ಹೆಚ್ಚಳ ಮಾಡಬೇಕು. ಹೊಸ ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ, ತಿದ್ದುಪಡಿಗಳಲ್ಲಿ ಆಗುತ್ತಿರುವ ವಿಳಂಭ ಧೋರಣೆಯನ್ನು ಸರಿಪಡಿಸಿ ತಕ್ಷಣವೇ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು ಮಾತನಾಡಿ, ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ರಸ್ತೆಗಳು ತೀವ್ರ ಹದಗೆಟ್ಟ ಕಾರಣ ಈ ಭಾಗದ ಶಾಲಾ ಮಕ್ಕಳು, ಗ್ರಾಮಸ್ಥರು ಜೀವ ಭಯದಿಂದಲೇ ಪ್ರಯಾಣಿಸುವಂತಾಗಿದೆ. ಸಂಬAಧಿಸಿದ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ರೈತರು ಬೆಳೆದ ಫಸಲು ಭಾರಿ ಮಳೆಯಿಂದ ನೆಲಕಚ್ಚಿದ್ದು ಬೆಳೆಸಮೀಕ್ಷೆ ನಡೆಸಿ ಹಾನಿಗೊಳಗಾಗಿರುವ ತೋಟಗಳಿಗೆ ಪರಿಹಾರ ನೀಡಬೇಕು. ಶೃಂಗೇರಿಗೆ ತೆರಳುವ ರಸ್ತೆಗಳು ಬಹುತೇಕ ಗುಂಡಿಗಳಿAದ ಕೂಡಿದ ಪರಿಣಾಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ವಿಜಯ್‌ಕುಮಾರ್, ಕಳಸಪ್ಪ, ಜಾರ್ಜ್ ಆಗಸ್ಟಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net