ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಅತ್ಯಗತ್ಯ

chn sep 09 darmasthala. (1)
Published on

ಚನ್ನಗಿರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಸ್ವ ಉದ್ಯೋಗ ಮತ್ತು ಸರ್ಕಾರಿ ಇಲಾಖೆಗಳ ಪರಿಚಯ ಸಲುವಾಗಿ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು.

ಈ ವೇಳೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಮಯದಲ್ಲಿ ಸರ್ಕಲ್ ಇನ್ಸ್​ಸ್ಪೆಕ್ಟರ್ ಎನ್. ರವೀಶ್ ಮಾತನಾಡಿ, ಮಹಿಳೆ ಮನೆಗೆ ಸೀಮಿತ ಎನ್ನುವ ಕಾಲ ಬದಲಾಗಿದೆ. ಎಲ್ಲ ರಂಗಗಳಲ್ಲಿ ಪುರುಷರ ಸಮನಾಗಿ ಗುರುತಿಸಿಕೊಂಡಿದ್ದಾಳೆ. ಜತೆಗೆ ಮಹಿಳೆಯರು ಮಾಡುವ ಕೆಲಸಗಳಲ್ಲಿ ಹೆಚ್ಚಿನ ಪ್ರಾಮಾಣಿಕತೆ, ಶಿಸ್ತು, ಸಮಯಪಾಲನೆ ಕಂಡು ಬರುತ್ತದೆ ಎಂದರು.

ಮಹಿಳೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಅತ್ಯಗತ್ಯ. ಶಿಕ್ಷಣ ಪಡೆಯದೆ ಸಬಲೀಕರಣ ಕಾಣಲು ಸಾಧ್ಯವಿಲ್ಲ. ಜ್ಞಾನ ಯಾವ ದಿಸೆಯಲ್ಲಿ ದೊರೆತರೂ ಅದನ್ನು ಪಡೆದುಕೊಳ್ಳುವ ತಿಳಿವಳಿಕೆ ನಮ್ಮಲ್ಲಿರಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ತಾಯಂದಿರು ನೀಡಿದ್ದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದು ಎಂದರು.

ಸಾಕ್ಷರತೆ, ಆತ್ಮವಿಶ್ವಾಸ ಹಾಗೂ ಕೌಶಲಗಳ ಸಹಾಯದಿಂದ ಮಹಿಳೆಯರು ಅಭಿವೃದ್ಧಿ ಹೊಂದಲು ಸಾಧ್ಯ. ಪಾಲಕರು ಗಂಡು- ಹೆಣ್ಣು ಎಂಬ ಭೇದ ಮಾಡದೆ ಗಂಡು ಮಗುವಿಗೆ ಕೊಡುವ ಶಿಕ್ಷಣ ಮತ್ತು ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕು. ಮನೆಯಲ್ಲಿ ಶಿಕ್ಷಣ ಪಡೆದ ಮಹಿಳೆ ಇದ್ದರೆ ಮುಂದೆ ಬರುವ ಎಲ್ಲರೂ ಶಿಕ್ಷಣ ಮತ್ತು ಸಂಸ್ಕಾರವನ್ನು ಸುಲಭವಾಗಿ ಪಡೆಯುತ್ತಾರೆ ಎಂದು ತಿಳಿಸಿದರು.

ಮಹಿಳಾ ಸಾಂತ್ವನ ಸಮಾಲೋಚಕಿ ಬಿ.ಎನ್. ನೇತ್ರಾವತಿ ಮಾತನಾಡಿ, ಮಹಿಳೆಯರನ್ನು ಸಮಾಜದಲ್ಲಿ ಮುಖ್ಯವಾಹಿನಿ ತರಲು ಸರ್ಕಾರ ಶೇ. 33ರಷ್ಟು ಮೀಸಲಾತಿ ನೀಡಿದೆ. ಇದರ ಪ್ರಯೋಜನ ಪಡೆಯಬೇಕು. ಪ್ರತಿ ಮನೆಯಲ್ಲಿ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಪ್ರತಿ ಹಂತದಲ್ಲಿ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾಳೆ. ಹೆಣ್ಣು ಇಲ್ಲದ ಮನೆಯಲ್ಲಿ ಸಂಸ್ಕಾರವಂತ ಮಕ್ಕಳು ಇರಲಾರರು ಎಂದರು.

ಜ್ಞಾನ ವಿಕಾಸ ಸದಸ್ಯರಿಗೆ ಮಹಿಳಾ ಸಾಂತ್ವನ, ನ್ಯಾಯಾಲಯ, ಅಗ್ನಿಶಾಮಕ ದಳ ಕಚೇರಿಗಳ ಪರಿಚಯವನ್ನು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮಾನ್ವಯಾಧಿಕಾರಿ ಶಶಿಕಲಾ, ಸದಸ್ಯರಾದ ನಾಗಮ್ಮ, ಹಿರೇಕೋಗಳೂರು ರೇಖಾ, ಸವಿತಾ, ಕಮಲಾಕ್ಷಿ, ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ಚನ್ನಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net