

ವಿರಾಜಪೇಟೆ: ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಿಹಾರ ನೀಡದ ಪರಿಣಾಮ ಕಾರ್ಮಿಕರ ಸಮಸ್ಯೆ ಜೀವಂತವಾಗಿದೆ. ಹಾಗಾಗಿ ಇದಕ್ಕೆ ಪರಿಹಾರ ಕಾಣಬೇಕು ಎನ್ನುವ ಅಭಿಲಾಷೆಯಿಂದ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಿಪಿಐ( ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಸದಸ್ಯ ಎಸ್.ವೈ.ಗುರುಶಾಂತ್ ತಿಳಿಸಿದರು.
ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಮಿತಿ ವತಿಯಿಂದ ಡಿ.16 ಮತ್ತು 17 ರಂದು ಜಿಲ್ಲಾ ಸಮ್ಮೇಳನ ಮತ್ತು ಬಹಿರಂಗ ಅಧಿವೇಶನ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೊಡಗಿನಲ್ಲಿ ನೆಲೆಸಿರುವ ಕಾರ್ಮಿಕರು ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆನೆ ಮಾನವ ಸಂಘರ್ಷ, ನಿರ್ಗತಿಕ ಕಾರ್ಮಿಕರಿಗೆ ಪುನರ್ವಸತಿ, ನಿವೇಶನ, ರೈತರು ಎದುರಿಸುತ್ತಿರುವ ಕೃಷಿ ಪದ್ಧತಿಗಳ ನೀತಿಗಳು, ಬೆಳೆ ಪರಿಹಾರ...ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ಬಹಿರಂಗ ಸಭೆ ಹಾಗೂ ಮೂರು ವರ್ಷಗಳಿಗೊಮ್ಮೆ ಪ್ರತಿನಿಧಿಗಳ ಸಮಿತಿಗಳ ರಚನೆಯಾಗಲಿದೆ ಎಂದರು.
ಭೂಮಿ ಸಮಸ್ಯೆ, ಭ್ರಷ್ಟಾಚಾರ, ಅಧಿಕಾರದ ವ್ಯಾಮೋಹದಿಂದ ವಂಶ ರಾಜಕೀಯಕ್ಕೆ ಮಣೆ ಹಾಕುವುದು, ಸ್ವಜನ ಪಕ್ಷಪಾತ, ಸಾರ್ವಜನಿಕರ ಆಸ್ತಿಗಳನ್ನು ಲೂಟಿ ಮಾಡುವುದರಲ್ಲಿ ಈ ಸರ್ಕಾರ ತೊಡಗಿವೆ. ಇಂತಹ ಸಂದರ್ಭದಲ್ಲಿ ಸಿಪಿಐ ಭ್ರಷ್ಟಾಚಾರ ರಹಿತವಾಗಿ ಪಾರದರ್ಶಕ ಆಡಳಿತ ನೀಡಲು ಮುಂದಾಗಿದ್ದು, ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಧಿವೇಶನ ಇದಾಗಲಿದೆ. ಹಾಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಭಾರತೀಯ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್ ಮಾತನಾಡಿ, ಜಿಲ್ಲಾ ಸಮ್ಮೇಳನ ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಲಿದೆ. ಮೊದಲ ದಿನ ಬೆಳಗ್ಗೆ 9 ಗಂಟೆಗೆ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯದಿಂದ ಮಹಿಳಾ ಸಮಾಜದವರೆಗೆ ಬೃಹತ್ ಜಾಥಾ ನಡೆಯಲಿದೆ. 17 ರಂದು ಪ್ರತಿನಿಧಿಗಳ ಅಧಿವೇಶನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಯಾದವ್‌ಶೆಟ್ಟಿ ಮತ್ತು ಎಸ್.ವೈ.ಗುರುಶಾಂತ್ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಖೆಯ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಭಾರತೀಯ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ.ಸಾಬು, ಪದ್ಮಿನಿ ಶ್ರೀಧರ್, ಕೆ.ಎಸ್.ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.