ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆ

C.P.Yogeshwar
C.P.Yogeshwar
Published on

ಮಂಡ್ಯ: ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಕಾಂಗ್ರೆಸ್‌ನಿಂದ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಸ್ಪರ್ಧೆ ಮಾಡುವಂತೆ ಒತ್ತಡವಿದೆ, ಮುಂದೆ ನೋಡುತ್ತೇನೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾರ್ಮಿಕವಾಗಿ ನುಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮೈತ್ರಿ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ನಾನು ಯೋಚನೆ ಮಾಡಿಲ್ಲ. ರಾಜಕಾರಣದಲ್ಲಿ ನಾವು ನೀವು ಯಾರು ಊಹೆ ಮಾಡದ ಘಟನೆಗಳು ನಡೆಯುತ್ತಿವೆ. ಆದರೆ ಪಕ್ಷಾಂತರ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನು ಪ್ರಕ್ರಿಯೆ ಪ್ರಾರಂಭವಾಗಿದೆ, ಕಾನೂನು ಹೋರಾಟ ಮಾಡುತ್ತಿದ್ದಾರೆ. ನನಗೆ ಸ್ಪಷ್ಟ ಚಿತ್ರಣ ಇಲ್ಲ. ಮುಖ್ಯಮಂತ್ರಿ ಬಹಳ ಸೂಕ್ಷ್ಮಮತಿಯಿಂದ ಇದ್ದಾರೆ, ನೋಡೋಣ. ಇನ್ನು ಚುನಾವಣಾ ಬಾಂಡ್ ಪ್ರಕರಣ ಸಂಬಂಧ ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ನಾನು ನೋಡಿಲ್ಲ ಎಂದ ಅವರು, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಮುಂದಿನ ತಿಂಗಳು 10ರಂದು ಘೋಷಣೆಯಾಗಲಿದೆ. ಎರಡೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕಿರುತ್ತದೆ. ಬಿಜೆಪಿ ಮತ್ತು ಜೆಡಿಎಸ್ ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮ ವರಿಷ್ಠರ ತೀರ್ಮಾನ ಕಾದು ನೋಡೋಣ. ಚುನಾವಣೆ ಸ್ಪರ್ಧೆಗೆ ಜನರ ಒತ್ತಾಯ ಇದೆ. ನಾನು ಕಾರ್ಯಕರ್ತನಾಗಿ ಪಕ್ಷದ ಮಾತನ್ನು ಕೇಳಬೇಕು ಎಂದರು.

ಚನ್ನಪಟ್ಟಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪದೇ ಪದೇ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆಗಳು ಬಂದ ಸಂದರ್ಭದಲ್ಲಿ ಭೇಟಿ ನೀಡುವುದು ಸಹಜ. ಉಪಚುನಾವಣೆ ಬಂದಾಗ ಘೋಷಣೆ ಮಾಡುವುದು ಸಾಮಾನ್ಯ. ಆದರೆ ಬಜೆಟ್‌ಗೂ ಉಪ ಚುನಾವಣೆ ಘೋಷಣೆಗೂ ವ್ಯತ್ಯಾಸ ಇದೆ. ಇಂತಹ ಕಾರ್ಯಕ್ರಮಗಳಿಗೆ ಅಷ್ಟೊಂದು ಮಹತ್ವ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net