ವಾಟ್ಸ್​ಆ್ಯಪ್​ ಮೂಲಕ ಬಿಜೆಪಿಗೆ ರಾಜೀನಾಮೆ ನೀಡಿದ ಸಿ.ಪಿ. ಯೋಗೇಶ್ವರ್​! ಸಿಎಂ ಸಿದ್ದು ಭೇಟಿ, ಕಾಂಗ್ರೆಸ್​ ಸೇರ್ಪಡೆ | CP Yogeshwar

CP Yogeshwar
Published on

CP Yogeshwar : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್​ ಕಣಕ್ಕಿಳಿಯುವುದು ಖಚಿತವಾಗಿದೆ. ಇಂದು ಬೆಳಗ್ಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ನಿವಾಸದಲ್ಲಿ ಕಾಣಿಕೊಂಡು ಅಚ್ಚರಿ ಮೂಡಿಸಿದ ಸಿಪಿವೈ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದಕ್ಕೂ ಮುನ್ನವೇ ವಾಟ್ಸ್​ಆ್ಯಪ್​ ಮೂಲಕ ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಂದ್ರ ಅವರಿಗೆ ವಾಟ್ಸ್​ಆ್ಯಪ್​ ಮೂಲಕ ಸಿ.ಪಿ. ಯೋಗೇಶ್ವರ್​ ಅವರು ರಾಜೀನಾಮೆ ಸಂದೇಶವನ್ನು ರವಾನಿಸಿದ್ದಾರೆಂದು ತಿಳಿದುಬಂದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಪಿವೈ ಕಾಂಗ್ರೆಸ್​ ಸೇರುವುದು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ, ಮಾಜಿ ಸಂಸದ ಡಿ.ಕೆ. ಸುರೇಶ್​, ಮದ್ದೂರು ಶಾಸಕ ಉದಯ್ ಗೌಡ, ಸಚಿವ ಜಮೀರ್​ ಅಹ್ಮದ್​, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್​ ತಂಗಡಗಿ ಇದ್ದರು.

ಜೆಡಿಎಸ್​ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಆಫರ್​ ಅನ್ನು ಸಿಪಿವೈ ತಿರಸ್ಕರಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ನಾಯಕರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಸ್ವತಃ ಸಿಪಿವೈ ಆರೋಪ ಮಾಡಿದ್ದಾರೆ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಆದರೆ, ಬಿಜೆಪಿ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಯೋಗೇಶ್ವರ್​ ಅವರು ಕೊನೆಗೂ ಕಾಂಗ್ರೆಸ್​ ಬಾಗಿಲನ್ನು ಬಡಿದಿದ್ದಾರೆ. ಇಂದು ಸಂಜೆ ಅಥವಾ ನಾಳೆ ಕಾಂಗ್ರೆಸ್​ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ.

ಅ.21ರಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಯೋಗೇಶ್ವರ್​ ಅವರು ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net