ಕಾಕ್ಸ್​ಟೌನ್ ಮಾರ್ಕೆಟ್ ಶೀಘ್ರ ಆರಂಭ

kocks town feb 25
Published on

ಬೆಂಗಳೂರು: ಕಾಕ್ಸ್​ಟೌನ್ ಮಾರುಕಟ್ಟೆಯನ್ನು ತಿಂಗಳೊಳಗೆ ಉದ್ಘಾಟನೆ ಮಾಡುವುದಾಗಿ ಸ್ಥಳೀಯ ಕಾರ್ಪೆರೇಟರ್ ಶಶಿರೇಖಾ ಮುಕುಂದ್ ಭರವಸೆ ನೀಡಿದ್ದಾರೆ.

ನೂತನ ಕಟ್ಟಡ ನಿರ್ವಣದ ಉದ್ದೇಶಕ್ಕೆ ಕಾಕ್ಸ್ ಟೌನ್ ಮಾರುಕಟ್ಟೆಯನ್ನು ಒಡೆದಿದ್ದ ಪಾಲಿಕೆ, 6 ತಿಂಗಳಲ್ಲಿ ನಿರ್ಮಾಣ ಮಾಡುವ ಭರವಸೆ ನೀಡಿತ್ತು. ಆದರೆ, ಅದಕ್ಕೆ ಅಗತ್ಯವಾದ ಹಣವನ್ನು ತೆಗೆದಿರಿಸದ ಕಾರಣಕ್ಕೆ ವಿಳಂಬವಾಗಿ ಮಾರುಕಟ್ಟೆಯಲ್ಲಿದ್ದ ಹಣ್ಣು, ತರಕಾರಿ, ಮೀನು, ಮಾಂಸ ಮಾರಾಟ ಮಳಿಗೆಗಳು ಪಾದಚಾರಿ ಮಾರ್ಗವನ್ನು ಅವಲಂಬಿಸಿವೆ. ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸಮಸ್ಯೆ ಸರಿಯಾಗದ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯಾಪಾರಿಗಳು ಸೋಮವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಿದರು.

ಹಣವನ್ನೇ ನೀಡಲಿಲ್ಲ: 2002ರಲ್ಲಿ ವ್ಯಾಪಾರಿಗಳನ್ನು ಮಾರುಕಟ್ಟೆ ಯಿಂದ ತೆರವುಗೊಳಿಸಿದ ಪಾಲಿಕೆ 2004ರಲ್ಲಿ ಹಳೆಯ ಮಾರುಕಟ್ಟೆಯನ್ನು ಕಟ್ಟಡ ತೆರವುಗೊಳಿಸಿತು. ಆದರೆ, ಹೊಸ ಕಟ್ಟಡ ನಿರ್ವಣಕ್ಕೆ ಹಣವನ್ನೇ ತೆಗೆದಿರಿಸಲಿಲ್ಲ. ನಂತರ ಒತ್ತಡದ ಕಾರಣಕ್ಕೆ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದು, ಎರಡು ವರ್ಷದ ಹಿಂದೆಯೇ ಕಟ್ಟಡ ನಿರ್ವಣವಾಗಿದೆ. ಆದರೆ, ಇನ್ನೂ ಕೆಲ ಕಾಮಗಾರಿ ಬಾಕಿ ಹಿನ್ನೆಲೆಯಲ್ಲಿ ಉದ್ಘಾಟನೆಗೊಂಡಿಲ್ಲ. ಗುತ್ತಿಗೆದಾರರಿಗೆ ಬಿಬಿಎಂಪಿ 50 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಈ ಬಾರಿ ಬಜೆಟ್​ನಲ್ಲಿ ಈ ಹಣವನ್ನು ತೆಗೆದಿರಿಸಿ ಬಾಕಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಾದಚಾರಿ ಮಾರ್ಗ ಸರಿಪಡಿಸಬೇಕು: ಮಾರುಕಟ್ಟೆ ಕಟ್ಟಡಕ್ಕೆ ನೀರು ಒದಗಿಸಲು ವಾರದಲ್ಲೇ ಕೊಳವೆಬಾವಿ ಕೊರೆಸಲಾಗುತ್ತದೆ ಎಂದು ಬಿಬಿಎಂಪಿ ಸದಸ್ಯೆ ಶಶಿರೇಖಾ ಮುಕುಂದ್ ಹೇಳಿ ದ್ದಾರೆ. ಇತ್ತೀಚೆಗಷ್ಟೆ ಶಾಸಕರ ನೇತೃತ್ವದಲ್ಲಿ ಈ ಕುರಿತು ಸಭೆ ನಡೆಸಲಾಗಿದೆ. ಇದೀಗ ವ್ಯಾಪಾರ ತಾಣವಾರುವ ಪಾದಚಾರಿ ಮಾರ್ಗವನ್ನು ಸರಿಪಡಿಸಿದರೆ ಮಾತ್ರ ಮಾರುಕಟ್ಟೆ ಸೂಕ್ತವಾಗಿ ನಡೆಯಲು ಸಾಧ್ಯ. ಈಗ ಎರಡೂ ಕಡೆ ನಮ್ಮ ಪಕ್ಷ ಇದೆ. ಎಲ್ಲ ಸಮಸ್ಯೆಗಳನ್ನೂ ತಿಂಗಳೊಳಗೆ ಬಗೆಹರಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಪ್ರತಿಭಟನೆಗೆ ಆಕ್ಷೇಪ: ವ್ಯಾಪಾರಿಗಳು ಸೋಮವಾರ ತಳ್ಳುಗಾಡಿಗಳಲ್ಲಿದ್ದ ಸೊಪು್ಪ, ತರಕಾರಿಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ರೀತಿಗೆ ಆಕ್ಷೇಪ ವ್ಯಕ್ತವಾಗಿದೆ. ಕಷ್ಟಪಟ್ಟು ಬೆಳೆದ ಆಹಾರ ಪದಾರ್ಥವನ್ನು ಈ ರೀತಿ ರಸ್ತೆಗೆ ಎಸೆಯುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತಾರಾ ಅನೂರಾಧಾ, ಮುಖ್ಯರಸ್ತೆಯಲ್ಲೇ ತರಕಾರಿ ಮಾರಾಟ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net