ವಡೆಯನಪುರ ಗ್ರಾಮದಲ್ಲಿ ಹುಲಿ ದಾಳಿಗೆ ಹಸುಗಳು ಬಲಿ

IMG-20240910-WA0138
ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದ ರವಿ ಎಂಬುವರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದೆ.
Published on

ಗುಂಡ್ಲುಪೇಟೆ: ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಹುಲಿದಾಳಿ ನಡೆಸಿ ಎರಡು ಹಸುಗಳು ಸಾವಿಗೀಡಾಗಿ ಮತ್ತೊಂದು ಜೀವನ್ಮರಣ ಹೋರಾಟ ನಡೆಸುತ್ತಿದೆ.

ಮಂಗಳವಾರ ಗ್ರಾಮದ ರವಿ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಮಧ್ಯಾಹ್ನ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಯಿಂದ ಎರಡು ಹಸುಗಳು ಸಾವಿಗೀಡಾದರೆ ಮತ್ತೊಂದರ ಕುತ್ತಿಗೆಗೆ ತೀವ್ರ ಗಾಯವಾಗಿದ್ದು ಜೀವನ್ಮರಣ ಹೊರಾಟ ನಡೆಸುತ್ತಿದೆ.

ಹುಲಿಯ ಘರ್ಜನೆ ಹಾಗೂ ಜಾನುವಾರುಗಳ ಅರಚಾಟದಿಂದ ಎಚ್ಚೆತ್ತ ಗ್ರಾಮಸ್ಥರು ಸ್ಥಳಕ್ಕೆ ಹೋಗುತ್ತಿದ್ದಂತೆ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ. ವಿಷಯ ತಿಳಿದ ಬಫರ್ ವಲಯದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಲ್ಲದೆ ಜಾನುವಾರು ನಷ್ಟಕ್ಕೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಹತ್ತಾರು ಗ್ರಾಮಗಳಲ್ಲಿ ಸಂಚಾರ: ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಹಾಡಹಗಲೇ ಹುಲಿ ದಾಳಿ ನಡೆಸಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ಹುಲಿ ಗ್ರಾಮದ ಜಮೀನಿನಲ್ಲಿ ಕಟ್ಟಿಹಾಕಿದ್ದ ನಾಲ್ಕು ಹಸುಗಳನ್ನು ಕೊಂದುಹಾಕಿತ್ತು. ಅಲ್ಲದೆ ಬಫರ್ ವಲಯದ ಗುಡ್ಡಗಳಲ್ಲಿ ಸಂಚರಿಸುತ್ತಿದೆ. ಅತ್ತ ಹುಂಡೀಪುರ, ಚೌಡಹಳ್ಳಿ. ವಡೆಯನಪುರ, ಕೊಡಸೋಗೆ, ಸೋಮನಪುರ, ಶೀಲವಂತಪುರ, ತ್ರಿಯಂಭಕಪುರ, ಕಗ್ಗಳದಹುಂಡಿ, ಕೆಲಸೂರು, ಪಡಗೂರು, ಕಲ್ಲಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿದೆ. ಇದರಿಂದ ರೈತರು ಕಾರ್ಮಿಕರು ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಹುಲಿ ಸೆರೆಗೆ ಕ್ರಮಕೈಗೊಳ್ಳಬೇಕು ಎಂದು ಮುಖಂಡ ರಾಜಣ್ಣ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net