

ಶಿವಮೊಗ್ಗ: ಪಿ ಅಂಡ್ ಟಿ ಕಾಲನಿ ರೈಲ್ವೆ ಅಂಡರ್‌ಪಾಸ್ ಸಮೀಪ ರೈಲಿಗೆ ಸಿಲುಕಿ ನಾಲ್ಕು ಹಸುಗಳು ಮೃತಪಟ್ಟಿವೆ. ಪಾಲಿಕೆಯಿಂದ ರೈಲ್ವೆ ಹಳಿ ಪಕ್ಕದಲ್ಲೇ ಕಸ ವಿಲೇವಾರಿ ಮಾಡುತ್ತಿರುವುದರಿಂದ ಅದನ್ನು ತಿನ್ನಲು ಹೋಗಿದ್ದ ಹಸುಗಳು ರೈಲಿಗೆ ಸಿಲುಕು ಮೃಪಟ್ಟಿವೆ.
ಹಳಿಯ ಒಂದು ಭಾಗದಲ್ಲಿ ಮಾತ್ರ ರೈಲ್ವೆ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸಲಾಗಿದೆ. ಹಸುಗಳು ಇನ್ನೊಂದು ಭಾಗದಿಂದ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿವೆ. ಮುಖ್ಯವಾಗಿ ಈ ಜಾಗದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಈ ಘಟನೆ ಸಂಭವಿಸಿದೆ ಎಂಬುದು ಸ್ಥಳೀಯ ಅಭಿಪ್ರಾಯ.
ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಆ ಜಾಗದಲ್ಲಿ ಕಸ ವಿಲೇವಾರಿ ಮಾಡದಂತೆ ಹಾಗೂ ಮೃತಪಟ್ಟ ಹಸುಗಳ ಮಾಲೀಕರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ಭಾಗದಲ್ಲಿ ಹಳಿಯ ಎರಡೂ ಕಡೆಗೆ ಬ್ಯಾರಿಕೇಡ್ ಅಳವಡಿಸುವಂತೆ ಆಗ್ರಹಿಸಿದರು.