

ಉಡುಪಿ: ಹುಲಿ ಉಗುರು ಹೊಂದಿದವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ರಾಜ್ಯ ಸರ್ಕಾರ ಗೋ ಹಂತಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರ ಗಮನ ಬೇರೆಡೆಗೆ ಸೆಳೆಯಲು ಹುಲಿ ಉಗರಿನ ಬಗ್ಗೆ ಚರ್ಚೆ ಎಬ್ಬಿಸಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜಿವಿಗಳ ಸಂರಕ್ಷಣೆ ದೃಷ್ಟಿಯಿಂದ ಹುಲಿ ಉಗುರು ಇರುವವರ ವಿರುದ್ಧ ಕಾರ್ಯಚರಣೆ ಸ್ವಾಗತಾರ್ಹ. ಹುಲಿ ಉಗುರು ಸಂರಕ್ಷಣೆ ಮಾಡಲಿ. ಆದರೆ ಗೋಮಾತೆಯ ಬಗ್ಗೆ ರ್ನಿಲಕ್ಷ್ಯ ಯಾಕೆ? ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಓಲೈಕೆ ರಾಜಕಾರಣದಲ್ಲಿ ನಿರತವಾಗಿದೆ. ಗೋ ಹಂತಕರನ್ನ ಬಂಧಿಸುತ್ತಿಲ್ಲ ಎಂದರು.
ಗೋ ಹತ್ಯೆ ನಿಫಿೇಧ ಕಾನೂನು ವಾಪಾಸು ತೆಗೆಕೊಂಡರೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಸರ್ಕಾರ ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಸಂಘಟನೆ ಕಾರ್ಯಾಚರಣೆ ನಡೆಸುತ್ತದೆ. ಸರ್ಕಾರ ಮಾಡುವ ಕೆಲಸವನ್ನು ಸಂಘಟನೆ ಮಾಡುವುದು ಅನಿವಾರ್ಯವಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣವಾಗುತ್ತದೆ ಎಂದರು.
ಕೆಡಿಪಿ ಸಭೆಯೇ ನಡೆಸುತ್ತಿಲ್ಲ
ಐದು ತಿಂಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಕೆ ಡಿ ಪಿ ಸಭೆಯನ್ನೇ ನಡೆಸಿಲ್ಲ, ಬಿಜೆಪಿ ಶಾಸಕರು ಸಭೆಯಲ್ಲಿ ಭಾಗವಹಿಸುವುದರಿಂದ ಈ ರೀತಿ ಮಾಡಿದ್ದಾರೆ. ಶಾಸಕರ ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಇಲ್ಲ. ಅನುದಾನದ ಕೊರತೆಯಿಂದ ಕೆಡಿಪಿ ಸಭೆ ಮಾಡುತ್ತಿಲ್ಲ. ಉಡುಪಿಯಲ್ಲಿ ಈ ಬಾರಿ ಪರ್ಯಾಯೋತ್ಸವ ನಡೆಯಲಿದೆ. ಎಲ್ಲ ಸರ್ಕಾರಗಳು ಉಡುಪಿ ಪರ್ಯಾಯಕ್ಕೆ 25 ರಿಂದ 50 ಕೋಟಿ ಅನುದಾನ ಕೊಟ್ಟಿದ್ದಾರೆ. ವಿಶ್ವದ ಗಮನ ಸೆಳೆಯುವ ಈ ಹಬ್ಬಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರಾವಳಿ ಶಾಸಕರ ನಿರ್ಲಕ್ಷ್ಯ
ಸಿಎಂ, ಸಚಿವರು ಉಡುಪಿಗೆ ಬಂದು ಹೋಗುವುದು ಹೋದ, ಪುಟ್ಟ ಬಂದ ಪುಟ್ಟ ಎಂಬಂತಾಗಿದೆ. ಕರಾವಳಿಯಲ್ಲಿ ಮಳೆ ಹಾನಿಯಾದ ಪ್ರದೇಶಗಳಿಗೆ ಯಾವುದೇ ಅನುದಾನ ಕೊಟ್ಟಿಲ್ಲ. ಉಡುಪಿ ಶೈಕ್ಷಣಿಕ ಜಿಲ್ಲೆಯಾಗಿದ್ದು, ಹೊರ ಜಿಲ್ಲೆಗಳಿಂದ ಅನೇಕ ವಿದ್ಯಾರ್ಥಿಗಳು ಬರುತ್ತಾರೆ. ಹೀಗೆ ಬಂದ ವಿದ್ಯಾರ್ಥಿಗಳಿಗೆ ಯಾವುದೇ ಹಾಸ್ಟೆಲ್ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಉಡುಪಿ ಜಿಲ್ಲೆಯನ್ನು ಸಂಪೂರ್ಣ ರ್ನಿಲಕ್ಷ್ಯ ಮಾಡಿ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದರು.