

ಹನೂರು: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಬುಧವಾರ ಸಂಜೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಗೋ ಪೂಜೆ ನೆರವೇರಿಸಲಾಯಿತು.
ದೀಪಾವಳಿ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲ ದೇಗುಲಗಳಲ್ಲಿ ಗೋಪೂಜೆಯನ್ನು ನೆರವೇರಿಸುವ ಸಂಬಂಧ ಧಾರ್ಮಿಕ ಮತ್ತು ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಯಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಸಂಜೆ 6.15ರಲ್ಲಿ ಆಯೋಜಿಸಿದ್ದ ಪೂಜೆ ಕಾರ್ಯಕ್ರಮದಲ್ಲಿ ಪೊನ್ನಾಚಿಯ ವೀರಪ್ಪ ಶ್ರೀಗಳು ಗೋವುಗಳಿಗೆ ಪೂಜೆ ನೆರವೇರಿಸಿ ಅಕ್ಕಿ, ಬೆಲ್ಲ ಹಾಗೂ ಸಿಹಿ ತಿನಿಸನ್ನು ನೀಡಿದರು.
ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮಾತನಾಡಿ, ದೇಶದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಲಾಗಿದ್ದು, ಗೋಮಾತೆ ಎಂದು ಭಾವಿಸಿ ಪೂಜಿಸಲಾಗುತ್ತಿದೆ. ಪುರಾಣ ಹಾಗೂ ಉಪನಿಷತ್ತುಗಳಲ್ಲಿ ವಿಶೇಷ ಸ್ಥಾನಮಾನವಿದೆ. ಗೋವುಗಳನ್ನು ಪೂಜಿಸಿದರೆ ಸಮಸ್ಯೆಗಳು ಪರಿಹಾರವಾಗುವುದರ ಜತೆಗೆ ವಾಸ್ತುದೋಷವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಸಮಾಜದಲ್ಲಿದ್ದು, ಈ ಬಗ್ಗೆ ಭಗವದ್ಗೀತೆ, ಭಾಗವತ ಮಹಾಪುರಾಣದಲ್ಲಿ ಗೋವುಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಜನರು ಗೋವುಗಳನ್ನು ಪೂಜಿಸುವುದು ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಲಿಪಾಡ್ಯಮಿಯಂದು ದೇಗುಲಗಳಲ್ಲಿ ಗೋವುಗಳನ್ನು ಪೂಜಿಸುವಂತೆ ಆದೇಶಿಸಿದೆ. ಹಾಗಾಗಿ ಗೋ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ಗೋ ಪೂಜೆಯ ಸಂಪ್ರದಾಯವನ್ನು ಕೊಂಡೊಯ್ಯಲು ಸಹಕಾರಿಯಾಗಿದೆ. ಜತೆಗೆ ಗೋವುಗಳ ರಕ್ಷಣೆಗೆ ವರದಾನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇಗುಲದ ಪಾರುಪತ್ತೇದಾರ ಮಹದೇವಸ್ವಾಮಿ, ಪ್ರಾಧಿಕಾರದ ನೌಕರರು, ಬೇಡಗಂಪಣ ಅರ್ಚಕರು ಹಾಗೂ ಭಕ್ತರು ಇದ್ದರು.