

ಮೈಸೂರು: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಇತ್ತೀಚೆಗೆ ರಾಜಕೀಯ ಸಮಾವೇಶಗಳು ನಡೆದ ಹಿನ್ನೆಲೆಯಲ್ಲಿ ಗೋಮೂತ್ರ ಸಿಂಪಡಿಸುವ ಚಳವಳಿ ನಡೆಸಿ ಗಮನ ಸೆಳೆದರು.
ಕಳ್ಳರು, ಸುಳ್ಳರು, ಭ್ರಷ್ಟರ ಪಾಪದ ಧೂಳು ಮೈಸೂರಿಗೆ ತಲುಪಿದೆ. ಅದು ತೊಲಗಲಿ ಎಂದು ಗೋಮೂತ್ರ ಸಿಂಪಡಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದು, ಅಪವಿತ್ರವಾದ ಮೈಸೂರು ಶುದ್ಧವಾಗಲಿ ಎಂದು ಹೀಗೆ ಮಾಡಿರುವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ವ್ಯಕ್ತಿ. ಅದಕ್ಕೆ ಅವರ ಮೇಲೆ ಗೌರವವಿದೆ. ಸಾಫ್ಟ್ ಕಾರ್ನರ್ ಅಂತ ಏನೂ ಇಲ್ಲ. ಸಿಎಂ ಆಗಿದ್ದ ಬೇರೆಯವರಿಗೆ ಹೋಲಿಸಿದರೆ ಸಿದ್ದರಾಮಯ್ಯ ಪ್ರಾಮಾಣಿಕರು. ಇಂತಹವರು ರಾಜ್ಯ ರಾಜಕಾರಣದಲ್ಲಿರಬೇಕು. ಬೇರೆಯವರೆಲ್ಲ ಕಳ್ಳರು, ಸುಳ್ಳರು, ಭ್ರಷ್ಟರೇ ಹೆಚ್ಚಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸ್ವಲ್ಪ ಗೌರವ ಹೆಚ್ಚು ಎಂದು ಹೇಳಿದರು.