

ಉಡುಪಿ: ಬಿದ್ಕಲಕಟ್ಟೆ ಪೇಟೆಯಲ್ಲಿ ಶನಿವಾರ ರಾತ್ರಿ ದನ ಕಳವು ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ದನಕಳ್ಳರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಪುದು ಗ್ರಾಮದ ಇಮ್ರಾನ್ (31) ಹಾಗೂ ಗಂಜಿಮಠ ಆಜಾದ್ ನಗರ ನಿವಾಸಿ ಇರ್ಷಾದ್(30) ಬಂಧಿತರು. ಶನಿವಾರ ಬೆಳಗಿನ ಜಾವ 03:50ಕ್ಕೆ ಹುಣ್ಸೆಮಕ್ಕಿ ಕಡೆಯಿಂದ ಒಂದು ಸ್ಕಾರ್ಪಿಯೊ ವಾಹನದಲ್ಲಿ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಂದು ರಸ್ತೆ ಬದಿ ಮಲಗಿದ್ದ ಒಂದು ಹಸುವನ್ನು ಹಿಡಿದು ಅದಕ್ಕೆ ಬಳ್ಳಿಯಿಂದ ಕುತ್ತಿಗೆಗೆ ಬಿಗಿದು ಹಿಂಸಾತ್ಮಕವಾಗಿ ಎಳೆದು ವಾಹನಕ್ಕೆ ತುಂಬಿಸಿ ಕಳವು ಮಾಡಿಕೊಂಡು ಬಿದ್ಕಲಕಟ್ಟೆಯಿಂದ ಶಿರಿಯಾರ ಕಡೆಗೆ ಹೋಗಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಮ್ರಾನ್ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿವೆ. ಇರ್ಷಾದ್(30) ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.