

ಮಂಡ್ಯ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಬಳಿಕ ಮೆರವಣಿಗೆ ಸಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ಪ್ರತಿಭಟಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲವೊತ್ತು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮನವಿ ಸ್ವೀಕರಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ರೈತರ ಬೆನ್ನಲುಬಾಗಿರುವ ಗೋವುಗಳ ರಕ್ಷಣೆಗಾಗಿ ಕಾಯ್ದೆಯನ್ನು ಇನ್ನಷ್ಟು ಪಡಿಸಬೇಕು. ಆ ಮೂಲಕ ರೈತರನ್ನು ಉಳಿಸಬೇಕು. ದೇಸಿ ತಳಿ ಹಸು ಮತ್ತು ಎತ್ತುಗಳು ಇಂದು ಅಳಿವಿನ ಅಂಚಿನಲ್ಲಿವೆ. ಗೋವು ದೇಶದ ಪ್ರಾಣ ಎಂದುಕೊಂಡೇ ಕಳೆದ 75 ವರ್ಷಗಳಿಂದ ಸರ್ಕಾರಗಳು ಗೋವು ಅಭಿವೃದ್ಧಿಯನ್ನು ಕಡೆಗಣಿಸಿವೆ. ಇದರಿಂದ ಕೃಷಿ ಕ್ಷೇತ್ರ ಸೊರಗಿ ಹೋಗಿದೆ. ನಷ್ಟದ ಹಾದಿಯಲ್ಲಿರುವ ವ್ಯವಸಾಯ ಬದುಕಿನಿಂದ ಇಂದಿನ ಯುವಜನತೆ ದಿಕ್ಕು ತೋಚದೆ ಉದ್ಯೋಗ ಅರಸುತ್ತಾ ನಗರಗಳತ್ತಾ ವಲಸೆ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಗೋವುಗಳನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ದೊಡ್ಡ ಹಿಡುವಳಿದಾರರು ಹೇಗೋ ಯಂತ್ರೋಪಕರಣಗಳ ನೆರವಿನಿಂದ ಕೃಷಿ ಮಾಡುತ್ತಾರೆ. ಆದರೆ, ಸಣ್ಣ ಹಿಡುವಳಿದಾರರಿಗೆ ಗೋವುಗಳೇ ಬೇಸಾಯಕ್ಕೆ ಆಧಾರ. ಗೋವುಗಳ ಗಂಜಲ ಮತ್ತು ಸಗಣಿಯು ಕೃಷಿಯಲ್ಲಿ ಬೆಳೆಗಳಿಗೆ ಒಳ್ಳೆಯ ಗೊಬ್ಬರ. ಇದರಿಂದ ಭೂಮಿಯ ಫಲವತತ್ತೆಯೂ ಹೆಚ್ಚುತ್ತದೆ. ಈ ಮೂಲಕ ಭೂಮಿಯ ಸತ್ವವನ್ನೂ ಕಾಪಾಡಿಕೊಳ್ಳಬಹುದು. ಹೈನುಗಾರಿಕೆ ರೈತರ ಪ್ರಮುಖ ಉಪಕಸುಬಾಗಿದೆ ಇದೆಲ್ಲವನ್ನೂ ಸರ್ಕಾರ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಇನ್ನು ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ಕೇಂದ್ರ ಸರ್ಕಾರವು ಪ್ರತಿ ರೈತರಿಗೆ 6 ಸಾವಿರ ರೂ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂಗಳನ್ನು ರೈತರ ವ್ಯವಸಾಯದ ಖರ್ಚಿಗೆ ನೀಡುತ್ತಿತ್ತು. ಇದರಿಂದ ಆರ್ಥಿಕವಾಗಿ ಚೇತರಿಸಿಕೊಂಡಿದ್ದ ರೈತರು, ಇತ್ತೀಚೆಗೆ ಕೃಷಿ ವೆಚ್ಚ ಹೆಚ್ಚಳದಿಂದ ಮತ್ತೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಯೋನೆಯಡಿ ರಾಜ್ಯ ಸರ್ಕಾರ ಪ್ರತಿ ರೈತರಿಗೆ 10 ಸಾವಿರ ರೂ ಪ್ರೋತ್ಸಾಹಧನ ನೀಡಬೇಕು. ರೈತ ಉತ್ಪನ್ನ ವಾಣಿಜ್ಯ ವ್ಯವಹಾರ ಕಾಯ್ದೆ, ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ(ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ, ಕೃಷಿ ಉತ್ಪನ್ನಗಳ ದಾಸ್ತಾನು ಮಿತಿ ರದ್ದುಗೊಳಿಸುವ ಅಗತ್ಯ ವಸ್ತುಗಳ(ತಿದ್ದುಪಡಿ) ಕಾಯ್ದೆಗಳು ಈಗಾಗಲೇ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಈ ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲಕರವಾಗಿರುವುದರಿಂದ ಅದನ್ನು ಉಳಿಸಿಕೊಂಡು ಇನ್ನಷ್ಟು ಬಲಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಣಿ ಸದಸ್ಯ ಪಣಕನಹಳ್ಳಿ ವೆಂಕಟೇಶ್, ಜಿಲ್ಲಾ ಮಹಿಳಾ ಪ್ರಮುಖ್ ಪುಟ್ಟಮ್ಮ, ದಿವ್ಯಾ, ಶಿವಲಿಂಗೇಗೌಡ, ಕಾರಸವಾಡಿ ಮಹದೇವು, ಅಪ್ಪಾಜಿ, ಪಾಪೇಗೌಡ, ವಿಜಯಕುಮಾರ್, ಚಂದಗಾಲು ಜೋಗಿಗೌಡ, ಹರೀಶ್, ಸಿದ್ದರಾಜುಗೌಡ, ವಸಂತ, ವಿವೇಕ್, ಮಹದೇವ, ನರಸಿಂಹ ಇತರರಿದ್ದರು.