ಹಾನಗಲ್ಲನಲ್ಲಿ ಗೋವುಗಳ ಮಾರಣ ಹೋಮ

Januvaru Raxane
Published on

ಹಾವೇರಿ: ಬೇರೆ ಬೇರೆ ಜಿಲ್ಲೆಗಳಿಂದ ಅಕ್ರಮವಾಗಿ ತಂದಿದ್ದ 30ಕ್ಕೂ ಅಧಿಕ ಗೋವುಗಳನ್ನು ರಾತ್ರೋ ರಾತ್ರಿ ವಧೆ ಮಾಡಿ ಮಾಂಸವನ್ನು ಬೇರೆಡೆಗೆ ಸಾಗಿಸುತ್ತಿದ್ದ ಜಾಲವೊಂದನ್ನು ಹಾನಗಲ್ಲ ಪೊಲೀಸರು ಭೇದಿಸಿದ್ದು, ವಧಾಲಯ ಹಾಗೂ ವಾಹನಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಹಾನಗಲ್ಲಿನ ಹೊರ ಭಾಗದ ಬೈಚವಳ್ಳಿ ರಸ್ತೆಯಲ್ಲಿರುವ ಮಸೂತಿಖಾನ ಎಂಬುವವರಿಗೆ ಸೇರಿದ ಎ.ಎಸ್.ಆರ್ ಅಗ್ರೋ ಫುಡ್ಸ್ ಎಂಬ ವಧಾಲಯದ ಮೇಲೆ ದಾಳಿ ನಡೆಸಿರುವ ಪೊಲೀಸರು, 9 ಜಾನುವಾರುಗಳನ್ನು ರಕ್ಷಿಸಿ ಲಕ್ಷಾಂತರ ರೂ. ಮೌಲ್ಯದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಹಾನಗಲ್ಲ ಹಾಗೂ ಶಿವಮೊಗ್ಗದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆದಿದೆ. ಅಂದಾಜು 30ಕ್ಕೂ ಹೆಚ್ಚು ಜಾನುವಾರುಗಳನ್ನು ನಾಲ್ಕಾರು ವಾಹನಗಳಲ್ಲಿ ತರಲಾಗಿತ್ತು ಎನ್ನಲಾಗಿದೆ. ವಧಾಲಯದಲ್ಲಿ ರಾತ್ರಿಯಿಡಿ ಗೋವುಗಳನ್ನು ವಧಿಸಲಾಗಿದ್ದು, ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದಾರೆ.

ಗೋ-ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಪ್ರತಿದಿನ ಹಾನಗಲ್ಲ ಹೊರಭಾಗದ ವಧಾಲಯದಲ್ಲಿ ಗೋವುಗಳ ಹತ್ಯೆ ನಿರಂತರವಾಗಿ ನಡೆದಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಕಳೆದ ವಾರ ಜಿಲ್ಲಾಧಿಕಾರಿಗೆ ಹಾಗೂ ಹಾನಗಲ್ಲ ತಹಸೀಲ್ದಾರರಿಗೆ ಶಿವಮೊಗ್ಗದ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ದೇವರಾಜ್ ಅರಳಿಹಳ್ಳಿ ದೂರು ಸಲ್ಲಿಸಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ 5 ಗಂಟೆಗೆ ಪೊಲೀಸ್ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ್ದರು. 13 ವರ್ಷ ಮೀರಿದ ಎಮ್ಮೆ ಹಾಗೂ ಕೋಣಗಳನ್ನು ಮಾತ್ರ ವಧಾಲಯದಲ್ಲಿ ವಧಿಸುವ ಪರವಾನಗಿ ಇದ್ದರೂ, ಇಲ್ಲಿ ಎತ್ತು, ಆಕಳು ಮತ್ತು ಕರುಗಳನ್ನೂ ವಧಿಸಲಾಗುತ್ತಿದೆ ಎಂದು ಜಾಗರಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ. ವಧಾಲಯದಲ್ಲಿ ಪಶು ವೈದ್ಯರಿಂದ ಗೋವುಗಳ ಆರೋಗ್ಯ ಪ್ರಮಾಣಪತ್ರ, ಯಾವುದೇ ಪರವಾನಗಿಯನ್ನು ಪಡೆಯದಿರುವುದೂ ಬೆಳಕಿಗೆ ಬಂದಿದೆ.

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ:

ಅನೇಕ ವರ್ಷಗಳಿಂದ ನಡೆಯುತ್ತಿರುವ ಈ ವಧಾಲಯದಲ್ಲಿ ಪರವಾನಗಿ ನೀಡಿರುವಂತೆ ಯಾವುದೇ ನಿಯಮಾವಳಿಗಳನ್ನೂ ಪಾಲಿಸದೆ, ಅಕ್ರಮವಾಗಿ ಜಾನುವಾರುಗಳನ್ನು ತಂದು ಕಡಿದು ಮಾಂಸವನ್ನು ಬೇರೆ ಬೇರೆ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಪಟ್ಟಣದ ದರ್ಗಾ ಹೊರವಲಯ, ರಾಜೀವನಗರ, ಇಂದಿರಾನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿಯೂ ಕೂಡ ಅಕ್ರಮವಾಗಿ ಗೋವುಗಳ ವಧೆ ಮಾಡಲಾಗುತ್ತಿರುವ ಕುರಿತು ಸ್ಥಳೀಯರು ಪುರಸಭೆಗೆ ದೂರು ಸಲ್ಲಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಗೋವುಗಳ ಹತ್ಯೆ ನಿರಾತಂಕವಾಗಿ ಮುಂದುವರಿದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ರವಾನೆ:

ಶಿವಮೊಗ್ಗ ಜಿಲ್ಲೆಯಲ್ಲಿ ವಧಾಲಯ ನಿರ್ವಣಕ್ಕೆ ಕಾನೂನು ತೊಡಕು ಉಂಟಾಗಿದ್ದರಿಂದಾಗಿ ಹಾನಗಲ್ಲಿನ ವಧಾಲಯದಲ್ಲಿ ಜಾನುವಾರುಗಳನ್ನು ಕಡಿದು ವಾಹನಗಳಲ್ಲಿ ಅಕ್ರಮವಾಗಿ ಶಿವಮೊಗ್ಗ ಜಿಲ್ಲೆಗೆ ರವಾನಿಸಲಾಗುತ್ತಿದೆ ಎಂದು ಹಿಂಜಾವೇ ಕಾರ್ಯಕರ್ತರು ದೂರಿದ್ದಾರೆ. ಇದೆಲ್ಲವೂ ಜಿಲ್ಲಾಡಳಿತಕ್ಕೆ ತಿಳಿಸಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಗೋ-ಹತ್ಯೆ ನಿಷೇಧ ಕಾಯ್ದೆಗೆ ಯಾವುದೇ ಬೆಲೆಯಿಲ್ಲದಂತಾಗಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ. ಸಿಪಿಐ ಎನ್.ಎಚ್. ಆಂಜನೇಯ, ಪಿಎಸ್​ಐ ಸಂಪತ್​ಕುಮಾರ ಆನಿಕಿವಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೆಡೆಗಳಿಂದ ತಂದಿರುವ ಮೂವತ್ತಕ್ಕೂ ಅಧಿಕ ಗೋವುಗಳನ್ನು ಅಕ್ರಮವಾಗಿ ವಧಿಸಿ ಮಾಂಸ ಮಾರಾಟ ಮಾಡುವ ದಂಧೆ ಹಾನಗಲ್ಲಿನಲ್ಲಿ ನಡೆಯುತ್ತಿದೆ. ಆದರೆ, ಪುರಸಭೆ, ಪೊಲೀಸ್ ಇಲಾಖೆಗಳನ್ನು ಯಾಮಾರಿಸಿ ಗೋ-ಹತ್ಯೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಗೋ-ಹತ್ಯೆ ಕಾನೂನು ಅನುಷ್ಠಾನಗೊಳ್ಳುತ್ತಿಲ್ಲ ಎಂಬುದನ್ನು ಈ ಪ್ರಕರಣ ಸಾಕ್ಷೀಕರಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮಾಹಿತಿ ನೀಡಿದ್ದೇವೆ. ಗೋವುಗಳ ಸಂರಕ್ಷಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಗೋವುಗಳ ಮಾರಣಹೋಮಕ್ಕೆ ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆಯಾಗಿದೆ. | ದೇವರಾಜ್ ಅರಳಿಹಳ್ಳಿ, ಹಿಂಜಾವೇ ಶಿವಮೊಗ್ಗ ಜಿಲ್ಲಾ ಸಂಯೋಜಕ ಆರು ಹಸುಗಳು, ಒಂದು ಎತ್ತು, ಎರಡು ಕರುಗಳನ್ನು ವಧಾಲಯದಿಂದ ರಕ್ಷಿಸಲಾಗಿದೆ. 30ಲ್ಲೀ ಅಧಿಕ ಜಾನುವಾರುಗಳನ್ನು ವಧಿಸಿರುವುದು ಕಂಡುಬಂದಿದೆ. ಸ್ಥಳದಲ್ಲಿಯೇ ಅವುಗಳ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ. ಇದುವರೆಗೂ ನಮ್ಮ ಇಲಾಖೆಯಿಂದ ಈ ವಧಾಲಯಕ್ಕೆ ಜಾನುವಾರುಗಳ ಆರೋಗ್ಯ ಪ್ರಮಾಣಪತ್ರ ನೀಡಿರುವುದಿಲ್ಲ. | ಡಾ.ಗಿರೀಶ ರೆಡ್ಡೇರ, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net