ಗೋ ಹತ್ಯೆ ನಿಷೇಧ ಗಾಂಧೀಜಿ ಕಲ್ಪನೆ: ಕೋಟ ಶ್ರೀನಿವಾಸ ಪೂಜಾರಿ

kota srinivas poojary
Published on

ಉಡುಪಿ: ಸಾಮಾಜಿಕ ವ್ಯವಸ್ಥೆಯಲ್ಲಿ ಗೋವುಗಳು ಪೂಜನೀಯ ಸ್ಥಾನ ಹೊಂದಿವೆ. ಗೋವುಗಳ ರಕ್ಷಣೆ ಗಾಂಧಿಯವರ ಕಲ್ಪನೆಯಾಗಿತ್ತು. ಜನರ ಭಾವನೆಗಳಿಗೆ ಮನ್ನಣೆ ಕೊಟ್ಟು ಬಿಜೆಪಿ ಸರಕಾರ ಈ ಕಾಯ್ದೆ ತಂದಿತ್ತು. ಗೋವುಗಳನ್ನೇಕೆ ಕಡಿಯಬಾರದು ಎಂಬ ಪಶುಸಂಗೋಪನ ಸಚಿವರ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಗೋ ಸಂರಕ್ಷಣಾ ಕಾಯ್ದೆ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮುಂದುವರಿಸುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಬಂದರೂ ಗೋಶಾಲೆ, ಗೋ ತಳಿಗಳ ಅಭಿವೃದ್ಧಿ, ಪಶುಗಳ ಸಂರಕ್ಷಣೆಗೋಸ್ಕರ ಕೆಲಸ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ದುರಾದೃಷ್ಟಕ್ಕೆ ಅವರು ಗೋವುಗಳನ್ನು ಕಡಿಯುವ ಬಗ್ಗೆ ಮಾತನಾಡಿರುವುದಕ್ಕೆ ಖೇದ ವ್ಯಕ್ತಪಡಿಸಿದರು.

ಒಂದು ರಾಜಕೀಯ ಪಕ್ಷವಾಗಿ ನಾವು ಇದನ್ನು ಬಹಳ ವಿರೋಧಿಸಿತ್ತೇವೆ. ಸದನದ ಒಳಗೂ, ಹೊರಗೂ ಈ ಧೋರಣೆಯನ್ನು ವಿರೋಧಿಸುತ್ತೇವೆ. ಗೋ ಸಂರಕ್ಷಣೆ ಮಾಡುವ ಮೂಲಕ ಹಾಲು ಉತ್ಪಾದನೆಗೆ ಹೆಚ್ಚಿನ ಅವಕಾಶ ಕೊಡಬೇಕು ಎಂದರು.

ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಿಸಬೇಕು, ಜನರು ನೀರಿಗೋಸ್ಕರ ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ತುರ್ತುಹಣ ಬಿಡುಗಡೆ ಮಾಡುವ ಬಗ್ಗೆ ಯಾರು ಮಾತನಾಡುತ್ತಿಲ್ಲ. ತುರ್ತಾಗಿ ಹಣ ಬಳಸಿಕೊಳ್ಳಲು ಅನುಮತಿ ಕೂಡ ನೀಡಿಲ್ಲ. ಪಂಚಾಯತ್ ರಾಜ್ ಮಂತ್ರಿಯಾಗಿ ಪ್ರಿಯಾಂಕ ಖರ್ಗೆ ಅವರು ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಲಿ, ಬಜರಂಗದಳ ನಿಷೇಧ ಮಾಡುವುದಕ್ಕಲ್ಲ ಎಂದರು.

ಎಂ.ಬಿ ಪಾಟೀಲರು ಸೂಲಿಬೆಲೆಯನ್ನು ಜೈಲಿಗಟ್ಟುತ್ತೇವೆ ಎನ್ನುತ್ತಾರೆ. ಸೂಲಿಬೆಲೆ ರಾಷ್ಟ್ರೀಯ ವಿಚಾರ, ಹಿಂದುತ್ವ, ರಾಷ್ಟ್ರೀಯವಾದದ ಕುರಿತು ಮಾತನಾಡುತ್ತಾರೆ. ಜನಸಾಮಾನ್ಯರಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜೈಲಿಗಟ್ಟಲು ಅವರೇನು ಭಯೋತ್ಪಾದಕರಲ್ಲ. ಯಾವುದೇ ವ್ಯಕ್ತಿಗಳನ್ನು ಜೈಲಿಗಟ್ಟಿದರೆ ಇನ್ನೊಂದು ತುರ್ತು ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net