

ಸುಳ್ಯ: ರಾತ್ರಿ ವೇಳೆ ಕಡಬದಿಂದ ಮೈಸೂರು ಕಡೆಗೆ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ಸುಳ್ಯದ ಮೊಗರ್ಪಣೆ ಬಳಿ ಹಿಂದುಪರ ಸಂಘಟಕರು ತಡೆದು ಪೊಲೀಸರಿಗೆ ಒಪ್ಪಿಸಿದರೂ ದಾಖಲೆ ಸಮರ್ಪಕವಾಗಿದ್ದ ಕಾರಣ ಪರಿಶೀಲನೆ ನಡೆಸಿ ಬಿಡುಗಡೆಗೊಳಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕಡಬದಿಂದ ಟೆಂಪೋದಲ್ಲಿ ತರುತ್ತಿದ್ದ ಗೋವುಗಳನ್ನು ಮೊಗರ್ಪಣೆ ಮಸೀದಿ ಬಳಿ ಹಿಂದುಪರ ಸಂಘಟನೆಯವರು ತಡೆದಿದ್ದಾರೆ. ವಾಹನದಲ್ಲಿ ಗೋವುಗಳಿದ್ದು, ಸುಳ್ಯ-ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ವಾಹನ ಮತ್ತು ಅದರಲ್ಲಿದ್ದ ಗೋವುಗಳನ್ನು ಹಾಗೂ ವ್ಯಕ್ತಿಗಳನ್ನು ಸುಳ್ಯ ಠಾಣೆಗೆ ಕರೆದೊಯ್ದರು.
ಬಳಿಕ ವಿಚಾರಣೆ ನಡೆಸಿದಾಗ ಮೈಸೂರಿನಿಂದ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬಂದಿದ್ದ ಯಾತ್ರಿಕರು ಕಡಬದಿಂದ ಗೋವುಗಳನ್ನು ಖರೀದಿಸಿ ತಮ್ಮೂರಿಗೆ ಕರೆದೊಯ್ಯಲು ಹೊರಟಿದ್ದರೆಂದು ಗೊತ್ತಾಗಿದೆ. ಅದಕ್ಕೆ ಬೇಕಾದ ದಾಖಲೆಗಳೆಲ್ಲವೂ ಸಮರ್ಪಕವಾಗಿ ಇದ್ದುದರಿಂದ ವಿಚಾರಣೆ ನಡೆಸಿ ಅವರನ್ನು ಬಿಟ್ಟಿದ್ದಾರೆ.