

ಮಂಡ್ಯ: ವಿಶ್ವದಲ್ಲಿ ಮೂಲ ಪರಂಪರೆ ಉಳಿಸಿಕೊಂಡು ಬಂದಿರುವ ಏಕೈಕ ರಾಷ್ಟ್ರ ಭಾರತ ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಶ್ಲಾಘಿಸಿದರು.
ಇಲ್ಲಿನ ಕಾವೇರಿ ನಗರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಗೋ-ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಪ್ರಕೃತಿಯಿಂದ ಉದ್ಭವವಾಗಿರುವ ವೇದ-ಉಪನಿಷತ್ತುಗಳನ್ನು ಅನುಸರಿಸುವ ಸಾಮರ್ಥ್ಯ ಹೊಂದಿದ್ದರು. ವೇದಗಳ ಮೂಲಕ ದೇಶಕ್ಕೆ ಪರಂಪರೆಯನ್ನು ಸೃಷ್ಟಿಸಿಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಧರ್ಮ ಪರಂಪರೆ ಮುಂದುವರಿದಿದ್ದು, ಮೂಲ ಪರಂಪರೆ ಎನ್ನುವುದು ಭಾರತದಲ್ಲಷ್ಟೇ ಉಳಿದುಕೊಂಡಿದೆ ಎಮದರು.
ಮಂಡ್ಯದಲ್ಲೂ ಪ್ರಾಚೀನ ಪರಂಪರೆ ಇದ್ದು, ಶ್ರೀರಂಗಪಟ್ಟಣಕ್ಕೆ ಗೌತಮ ಋಷಿಗಳು ಬಂದು ತಪಸ್ಸು ಮಾಡಿ ಶ್ರೀರಂಗನಾಥ ಸ್ವಾಮಿಯನ್ನು ಸೃಷ್ಟಿ ಮಾಡಿದರು. ನಂತರ ಅನೇಕ ಆಚಾರ್ಯರು ಮಂಡ್ಯಕ್ಕೆ ಬಂದು ದೇವಸ್ಥಾನಗಳನ್ನು ನಿರ್ಮಾಣ ಈ ಮಣ್ಣಿನ ಪಾವಿತ್ರ್ಯತೆ ಹೆಚ್ಚಿಸಿದರು ಎಂದರು.
ಇಂತಹ ನೆಲದಲ್ಲಿ ಹುಟ್ಟಿರುವ ನಾವು ಪುಣ್ಯವಂತರು, ಮೂಲ ಪರಂಪರೆಯನ್ನು ಉಳಿಸಿಕೊಂಡಿರುವುದರಿಂದಲೇ ಭಾರತ ವಿಶ್ವಮಟ್ಟದಲ್ಲಿ ಪ್ರಾಧಾನ್ಯತೆ ಪಡೆದುಕೊಂಡಿದೆ. ನಮ್ಮ ಧರ್ಮದಲ್ಲಿರುವ ತತ್ವಶಾಸ್ತ್ರವನ್ನು ಎಲ್ಲರೂ ಮೆಚ್ಚಿದ್ದಾರೆ. ಅದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ದೇಶದಲ್ಲಿ ಧರ್ಮ ಉಳಿದಿರುವುದರಿಂದಲೇ ನಾವು ಬದುಕಲು ಸಾಧ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೈವಿಧ್ಯಮಯ ಪರಂಪರೆ ಆಧಾರದ ಮೇಲೆ ವಿಕಸಿತ ಭಾರತ ನಿರ್ಮಾಣ ಮಾಡುವ ಕನಸು ಕಂಡಿದ್ದಾರೆ. ಅದನ್ನು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ವಿವರಿಸಿದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿಕೊಟ್ಟು, ಒಳ್ಳೆಯ ವಾತಾವರಣದಲ್ಲಿ ಉನ್ನತ ಉದ್ಯೋಗ ಸೃಷ್ಟಿಸಿಕೊಡುವ ಧಾವಂತ ಹೆಚ್ಚಾಗಿದೆ. ಹೀಗಾಗಿ ಹಸುಗಳು, ಎತ್ತುಗಳು, ದನ-ಕರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಆದರೆ, ಹಬ್ಬಗಳನ್ನು ಜೀವಂತವಾಗಿ ಉಳಿಸುವ ಕೆಲಸ ನಿರಂತರವಾಗಿ ಮುಂದುವರಿದುಕೊಂಡು ಬಂದಿರುವುದು ವಿಶೇಷ ಎಂದು ಅಭಿಪ್ರಾಯ ಪಟ್ಟರು.
ಶಾಸಕ ರವಿಕುಮಾರ್ ಗಣಿಗ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಗೋ ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅಶೋಕ್, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಗ್ರಾ.ಪಂ.ಅಧ್ಯಕ್ಷೆ ಸುವರ್ಣಾವತಿ, ಶಿವಲಿಂಗಪ್ಪ, ಹೊಸಹಳ್ಳಿ ಶಿವು, ನವನೀತ್‌ಗೌಡ ಇತರರಿದ್ದರು.