

ಮಂಡ್ಯ: ಭಾರತೀಯ ಗೋತಳಿ ಉಳಿಸುವುದು ಮತ್ತು ಗವ್ಯೋತ್ಪನ್ನಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯಾದ್ಯಂತ 88 ದಿನ ನಂದಿ ರಥಯಾತ್ರೆ ನಡೆಯುತ್ತಿದೆ. ಅಂತೆಯೇ ಮಾ.4ರಂದು ನಗರಕ್ಕೆ ಆಗಮಿಸಲಿದೆ ಎಂದು ಗೋ ಸಂರಕ್ಷಣಾ ಸಮಿತಿ ಸದಸ್ಯ ಶಶಿಕುಮಾರ್ ಹೇಳಿದರು.
ಗೋಸೇವಾ ಗತಿವಿಧಿ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ 2024 ಡಿ.31ರಿಂದ ಮಾ.29ರವರೆಗೆ ಯಾತ್ರೆ ಆಯೋಜಿಸಲಾಗಿದೆ. 4ರಂದು ಸಂಜೆ 4 ಗಂಟೆಗೆ ಮಂಡ್ಯಕ್ಕೆ ರಥಯಾತ್ರೆ ಆಗಮಿಸಲಿದೆ. ಸಂಜೆ 6 ಗಂಟೆಗೆ ನಗರದ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5ರಂದು ಬೆಳಗ್ಗೆ 10 ಗಂಟೆಗೆ ಸಾರಿಗೆ ಬಸ್ ನಿಲ್ದಾಣದಿಂದ ಹೊರಟು ಕೆರಗೋಡು ಮಾರ್ಗವಾಗಿ ನಾಗಮಂಗಲ ಪಟ್ಟಣಕ್ಕೆ ಸಂಜೆ 5 ಗಂಟೆಗೆ ತಲುಪಲಿದೆ. ಅಂದು ನಾಗಮಂಗಲದ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗ ಸಂಜೆ 6 ಗಂಟೆಗೆ ಬೃಹತ್ ಧಾರ್ಮಿಕ ಸಭೆ ಆಯೋಜಿಸಲಾಗಿದೆ. 6ರಂದು ಬೆಳಗ್ಗೆ 10 ಗಂಟೆಗೆ ಟಿ.ಬಿ.ಬಡಾವಣೆಯ ಗಣಪತಿ ದೇವಸ್ಥಾನದಿಂದ ಹೊರಟು ಪಾಂಡವಪುರ ಮಾರ್ಗವಾಗಿ ಶ್ರೀರಂಗಪಟ್ಟಣ ತಲುಪಲಿದೆ. ಸಂಜೆ 4 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಲಿದೆ. ಅಂದು ಸಂಜೆ 6 ಗಂಟೆಗೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿದೆ. ಮಾ.7ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿಗೆ ತೆರಳಲಿದೆ ಎಂದು ವಿವರಿಸಿದರು.
ವಿಷಮುಕ್ತ ಗಾಳಿ, ಮಣ್ಣು, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋಕಥೆ, ಮನೆ ಮನೆಯಲ್ಲಿ ಗೋವು, ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಸಿ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧವನ್ನು ಜನರಿಗೆ ತಿಳಿಸುವುದು, ಗೋಮಾತೆ ವಿಶ್ವಮಾತೆ-ಭಾರತ ವಿಶ್ವಗುರು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು ಸಹಜ ಕೃಷಿ ವಿಸ್ತರಣೆ, ಸ್ವದೇಶಿ, ಗವ್ಯ ಉತ್ಪನ್ನ ಬಳಕೆಯ ಪ್ರಚಾರ, ಮಣ್ಣು ಉಳಿಸುವ ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸುವುದು, ದೇಸಿ ಬೀಜ ಸಂರಕ್ಷಣೆ, ಧರ್ಮಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಠಿ, ಋಣಮುಕ್ತ ಭಾರತ, ಸಮೃದ್ಧ ಭಾರತ ವಿಶ್ವಗುರು ಭಾರತವಾಗುವ ನಿಟ್ಟಿನಲ್ಲಿ ನಂದಿ ರಥಯಾತ್ರೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಮೈಸೂರು ವಿಭಾಗದ ಗೋರಕ್ಷಕ ಪುನೀತ್, ಗೋ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಮಳವಳ್ಳಿ ಮಂಜುನಾಥ್, ಮರೀಗೌಡ ಇದ್ದರು.