ಕಲ್ಲಳ್ಳಿಯಲ್ಲಿ ಹುಲಿ ದಾಳಿಗೆ ಹಸು ಬಲಿ

01
ಗುಂಡ್ಲುಪೇಟೆ ತಾಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ಹಸುವಿನ ಮುಂದೆ ಕಣ್ಣೀರು ಹಾಕುತ್ತಿರುವ ರೈತ.
Published on

ಗುಂಡ್ಲುಪೇಟೆ: ತಾಲೂಕಿನ ಪಡಗೂರು ಗ್ರಾಮದಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೆ ಪಟಾಕಿ ಶಬ್ದ ಕೇಳಿ ವಿಚಲಿತವಾದ ಹುಲಿ ನೆರೆಯ ಕಲ್ಲಳ್ಳಿ ಗ್ರಾಮದತ್ತ ನುಗ್ಗಿ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಬುಧವಾರ ಕೊಂದು ಹಾಕಿದೆ.

ಕೂಂಬಿಂಗ್ ಸಂದರ್ಭದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜನರ ಭದ್ರತೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೋಮವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದರೂ ಅರಣ್ಯ ಇಲಾಖೆ ಯಾವುದೇ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೆ ಹುಲಿ ದಾಳಿಗೆ ಗ್ರಾಮದ ವೀರಭದ್ರಪ್ಪ ಅವರ ಹಸು ಬಲಿಯಾಗಿದೆ.

ದೀಪಾವಳಿ ಹಬ್ಬದ ದಿನದಿಂದಲೂ ಅಗತಗೌಡನಹಳ್ಳಿ, ಹಕ್ಕಲಪುರ, ವೀರನಪುರ, ಪಡಗೂರು, ಪರಮಾಪುರ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದೆ. ಬುಧವಾರ ಪರಮಾಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡ ಖಚಿತ ಮಾಹಿತಿ ಮೇರೆಗೆ ಬಫರ್ ವಲಯದ ಅರಣ್ಯ ಸಿಬ್ಬಂದಿ ಸಾಕಾನೆ ಪಾರ್ಥಸಾರಥಿ ನೆರವಿನಿಂದ ಬೆಳಗ್ಗೆಯೇ ಕೂಂಬಿಂಗ್ ಆರಂಭಿಸಿತು.

ಕಬ್ಬಿನ ತೋಟವೊಂದರಲ್ಲಿ ಹುಲಿ ಅಡಗಿದೆ ಎಂಬ ಸುಳಿವು ಸಿಕ್ಕಿದ ಕೂಡಲೇ ಗಾರ್ಡ್ ಒಬ್ಬ ಪಟಾಕಿ ಸಿಡಿಸಿದ್ದರಿಂದ ವಿಚಲಿತವಾದ ಹುಲಿ ನೆರೆಯ ಕಲ್ಲಹಳ್ಳಿ ಗ್ರಾಮದತ್ತ ಸಾಗಿ ವೀರಭದ್ರಪ್ಪ ಅವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಕೊಂದುಹಾಕಿದೆ. ಕಣ್ಣೆದುರೇ ಹುಲಿ ಹಸುವನ್ನು ಕೊಂದು ಹಾಕಿದ್ದರಿಂದ ಆಘಾತಕ್ಕೊಳಗಾದ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಹೆಡಿಯಾಲ ವ್ಯಾಪ್ತಿಯ ಬಡಗಲಪುರ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವೇಗೌಡನ ಮೇಲೆ ದಾಳಿ ನಡೆಸಿದ್ದ ಘಟನೆ ನಡೆದಿದ್ದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ, ನೆರೆಯ ಪರಮಾಪುರ ಗ್ರಾಮದಲ್ಲಿ ಹುಲಿ ಪತ್ತೆಗೆ ಕೂಂಬಿಂಗ್ ನಡೆಸುತ್ತಿದ್ದರೂ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಮಾಹಿತಿ ನೀಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕಲ್ಲಳ್ಳಿ ಮಹೇಶ್ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಮಾಪುರ ಸಮೀಪ ಕೂಂಬಿಂಗ್ ನಡೆಸುತ್ತಿದ್ದಾಗ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿದ್ದರಿಂದ ಆಕ್ರೋಶಗೊಂಡ ಹುಲಿ ಅಲ್ಲಿಂದ ಹೊರಬಂದು ಕಲ್ಲಳ್ಳಿಯ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಕೊಂದು ಹಾಕಿದೆ. ಈ ಸಂದರ್ಭದಲ್ಲಿ ಜಮೀನುಗಳಲ್ಲಿ ರೈತರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಹುಲಿ ಆಕಸ್ಮಾತ್ ಹಸುವಿನ ಬದಲು ಮನುಷ್ಯರ ಮೇಲೆರಗಿದ್ದರೆ ಯಾರು ಹೊಣೆ? ಈ ಬಗ್ಗೆ ಕರೆ ಮಾಡಿ ಮಾಹಿತಿ ನೀಡಿದರೂ ಎಸಿಎಫ್ ಸುರೇಶ್ ಸ್ಥಳಕ್ಕೆ ಆಗಮಿಸದೆ ರೈತರ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ಭೇಟಿ ನೀಡಿ ಹುಲಿಯ ಚಲನವಲನ ಪತ್ತೆಗೆ ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗುವುದು. ಶೀಘ್ರವೇ ಪರಿಹಾರ ಕೊಡಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net