

ನಂಜನಗೂಡು: ತಾಲೂಕಿನ ಹೆಡಿಯಾಲ ಕಾಡಂಚಿನ ಗ್ರಾಮವಾದ ಬಳ್ಳೂರು ಹುಂಡಿಯಲ್ಲಿ ಹುಲಿ ದಾಳಿಯಿಂದ ಸೋಮವಾರ ಮಧ್ಯಾಹ್ನ ಮತ್ತೊಂದು ಹಸು ಬಲಿಯಾಗಿದೆ.
ಗ್ರಾಮದ ರೈತ ರಾಜೇಶ್ ಅವರ ಹಸು ಹುಲಿ ದಾಳಿಗೆ ಮೃತಪಟ್ಟಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ರಾಜೇಶ್ ಹಸುವನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. ಜಮೀನಿನ ಪಕ್ಕದ ಪೊದೆ ಸಮೀಪ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ಹಠಾತ್ ದಾಳಿ ನಡೆಸಿದೆ. ಇದನ್ನು ಕಂಡ ರೈತ ರಾಜೇಶ್ ಬಿಚ್ಚಿ ಬಿದ್ದಿದ್ದು, ಪಕ್ಕದ ರೈತರ ಸಹಕಾರದಿಂದ ಹುಲಿ ಓಡಿಸಿದ್ದಾರೆ. ಹಸುವಿನ ರಕ್ತಹೀರಿ ಹುಲಿ ಕಾಲ್ಕಿತ್ತಿದೆ.
ಕಳೆದ ಸೋಮವಾರ ಇದೇ ಗ್ರಾಮದಲ್ಲಿ ಶಿವಯ್ಯ ಅವರ ಹಸುವನ್ನು ಬಲಿ ಹುಲಿ ಪಡೆದಿತ್ತು.