

ನಂಜನಗೂಡು: ತಾಲೂಕಿನ ಹಳೆಪುರ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದು, ಮತ್ತೊಂದು ಹಸು ಗಾಯಗೊಂಡಿದೆ.
ಗ್ರಾಮದ ನಿವಾಸಿ ರಾಮನಾಯಕ ಅವರು ಭಾನುವಾರ ಮಧ್ಯಾಹ್ನ ಹಳೆಪುರ -ಹಂಪಾಪುರ ಗ್ರಾಮಗಳ ನಡುವೆ ಹಸುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಹುಲಿ ಹಸುವಿನ ಮೇಲೆ ಎರಗಿದೆ. ಈ ನಡುವೆ ಶನಿವಾರ ರಾತ್ರಿ ಏಚಗುಂಡ್ಲ ಸಮೀಪ ಹುಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಡಂಚಿನ ಪ್ರದೇಶದಲ್ಲಿ ಒಂದು ವಾರದಿಂದ ಹುಲಿ ದಾಳಿಗೆ ಮೂವರು ಬಲಿಯಾಗಿದ್ದು, ತಾಲೂಕಿನಲ್ಲೂ ಏನೇ ಕಂಡರೂ ಕೂಡ ಹುಲಿ ಬಂದಿದೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಳೆಪುರ ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಹಸುವಿನ ಮೇಲೆ ದಾಳಿ ಮಾಡಿದ ಪ್ರಾಣಿ ಹುಲಿಯೋ ಅಥವಾ ಚಿರತೆಯೋ ಎಂಬುದನ್ನು ಹೆಜ್ಜೆ ಗುರುತುಗಳಿಂದ ಸ್ಪಷ್ಟಪಡಿಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ನಿತಿನ್‌ಕುಮಾರ್‌ತಿಳಿಸಿದ್ದಾರೆ.
ಚಿರತೆ ದಾಳಿಗೆ ಮೇಕೆ ಬಲಿ: ಕೌಲಂದೆ ಹೋಬಳಿಯ ಹೆಡತಲೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಗ್ರಾಮದ ಕಾಳನಾಯಕ ಅವರು ತಮ್ಮ ಜಮೀನಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ.