ಮದ್ದೂರು: ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಯಿಂದ ತೋಟದ ಮನೆಯೊಂದರಲ್ಲಿ ಕಟ್ಟಿಹಾಕಿದ್ದ ಹಸುವೊಂದು ಮೃತಪಟ್ಟಿದೆ.
ಗ್ರಾಮದ ವೆಂಕಟೇಶ್ ಎಂಬುವರಿಗೆ ಸೇರಿದ್ದ ಹಸು ಚಿರತೆ ದಾಳಿಗೆ ಬಲಿಯಾಗಿದ್ದು, ಸುಮಾರು 35 ಸಾವಿರ ರೂ. ನಷ್ಟವಾಗಿದೆ ಎಂದು ರೈತ ವೆಂಕಟೇಶ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮೂರು ದಿನಗಳ ಹಿಂದಷ್ಟೇ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ ಪರಿಣಾಮ ಸುಮಾರು 20 ಸಾವಿರ ರೂ. ನಷ್ಟ ಉಂಟಾಗಿತ್ತು ಎಂದು ತಿಳಿಸಿರುವ ಅವರು, ಹಲವಾರು ತಿಂಗಳುಗಳಿಂದ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮವಹಿಸಿ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದಾದರೂ ಅರಣ್ಯಾಧಿಕಾರಿ ಕೂಡಲೇ ಕ್ರಮ ಕೈಗೊಂಡು ಚಿರತೆಗಳ ಸೆರೆಗೆ ಮುಂದಾಗಬೇಕು. ಆಗಿರುವ ನಷ್ಟವನ್ನು ಭರಿಸಿಕೊಡಬೇಕೆಂದು ಇಲಾಖೆಯನ್ನು ಆಗ್ರಹಿಸಿದ್ದರು.