

ಹಲಗೂರು: ಇಲ್ಲಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕಾಡು ಪ್ರಾಣಿಗಳ ಬೇಟೆಗಾಗಿ ಜಮೀನಿನಲ್ಲಿ ಇಟ್ಟಿದ್ದ ಸಿಡಿಮದ್ದು ಕಡಿದು ಹಸುವೊಂದರ ಬಾಯಿ ಛಿದ್ರವಾಗಿದೆ.ಮೂಲತಃ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಶಿವರಾಮ್ ಎಂಬುವರ ಜಮೀನಿನಲ್ಲಿ ಯಾರೊ ಅಪರಿಚಿತರು ಕಾಡು ಪ್ರಾಣಿಗಳ ಬೇಟೆಗಾಗಿ ಮೂರು ಕಡೆ ಸಿಡಿಮದ್ದನ್ನು ಇಟ್ಟಿದ್ದರು. ಈ ವೇಳೆ ಮೇಯಲು ಹೋದ ಹಸು ಸಿಡಿಮದ್ದು ಸಿಡಿದು ತೀರ್ವ ಗಾಯಗೊಂಡಿದೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್, ಎಸ್‌ಐ ಲೋಕೇಶ್ ಸ್ಥಳ ಪರಿಶೀಲಿಸಿದರು. ಈ ವೇಳೆ ಮತ್ತೆ ಎರಡು ಕಡೆ ಸಿಡಿಮದ್ದು ಅಡಗಿಸಿಟ್ಟಿದ್ದನ್ನು ಶ್ವಾನದಳ ಪತ್ತೆ ಮಾಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವರಾಮ್, ಸುಮಾರು ವರ್ಷಗಳಿಂದ ನಾವು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಇದೀಗ ಸಿಡಿಮದ್ದು ಸೇವಿಸಿ ಹಸುವಿನ ಬಾಯಿಗೆ ಗಂಭೀರವಾಗಿ ಗಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.