ಜಾನುವಾರು ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ

IMG-20240421-WA0039.jpg
Published on


ಚಾಲಕ, ಕ್ಲೀನರ್‌ಗೆ ಗಾಯ ಹಿಂದುಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಹೊರವಲಯದ ಸುವರ್ಣ ವಿಧಾನಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾನುವಾರು ಸಾಗಿಸುತ್ತಿದ್ದ ಲಾರಿ ತಡೆದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಲಾರಿ, ಚಾಲಕ ಮತ್ತು ಕ್ಲೀನರ್‌ನನ್ನು ಥಳಿಸಿದ್ದಾರೆ.
ಭಾನುವಾರ ಸಂಜೆ ಮಹಾರಾಷ್ಟ್ರ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಲಾರಿಯಲ್ಲಿ ಜಾನುವಾರು ಸಾಗಿಸುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಲಾರಿ ತಡೆದಿದ್ದಾರೆ. ಆಗ ಲಾರಿ ಚಾಲಕ, ಕ್ಲೀನರ್‌ನೊಂದಿಗೆ ಮಾತಿನ ಚಕಮಕಿ ನಡೆದಿದೆ. ಉದ್ರಿಕ್ತ ಯುವಕರ ಗುಂಪು ಚಾಲಕ ಮತ್ತು ಕ್ಲೀನರ್‌ನನ್ನು ಥಳಿಸಿ ಲಾರಿ ಗಾಜು ಪುಡಿ ಪುಡಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಗಾಯಗೊಂಡಿರುವ ಚಾಲಕ ಮತ್ತು ಕ್ಲೀನರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ: ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿ ಬಿಜೆಪಿ ಮುಖಂಡರು ಸ್ಥಳಕ್ಕೆ ದೌಡಾಯಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಅವ್ಯಾಹತವಾಗಿ ಗೋವುಗಳ ಸಾಗಣೆ ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಲಾರಿ ತಡೆದು ಕ್ರಮ ಕೈಗೊಳ್ಳಬೇಕಾದ ಪೊಲೀಸರ ಕೆಲಸವನ್ನು ಸಾರ್ವಜನಿಕರು ಮಾಡುವ ಪರಿಸ್ಥಿತಿ ಬಂದಿದೆ ಎಂದು ಶ್ರೀರಾಮಸೇನೆ ಹಿಂದುಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ವೋಟ್…1
ಜಾನುವಾರು ಸಾಗಿಸುತ್ತಿದ್ದ ಲಾರಿ ತಡೆದ ಯುವಕರ ಗುಂಪು ಪ್ರತಿಭಟನೆ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸಲಾಗಿದ್ದು, ಹಸುಗಳನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ನಿಯಮ ಮೀರಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು.
ರೋಹನ್ ಜಗದೀಶ, ಡಿಸಿಪಿ, ಬೆಳಗಾವಿ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net