

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿ ವ್ಯಾಪ್ತಿಯ ಹಳದಾಸನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯ ಸರಣಿ ದಾಳಿಗೆ ಹಸು ಮತ್ತು ಮೇಕೆ ಬಲಿಯಾಗಿದೆ.
ಗ್ರಾಮದ ನಾಗರಾಜು ಅವರ ಕರು ಹಾಗೂ ನಿರಂಜನ್ ಅವರ ಮೇಕೆ ಬಲಿಯಾಗಿದ್ದು, ಗ್ರಾಮದ ಒಳಪ್ರವೇಶಿಸಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಹೋಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಗ್ರಾಮದ ಸುತ್ತಳತೆಯಲ್ಲಿ ಯಾವುದೇ ಅರಣ್ಯ ಪ್ರದೇಶವಿಲ್ಲದಿದ್ದರೂ ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಜನರು ಭಯಬೀತರಾಗಿದ್ದಾರೆ.
ಎರಡು ದಿನದ ಅಂತರದಲ್ಲಿ ಚಿರತೆ ಹಸು ಮತ್ತು ಮೇಕೆ ಬಲಿ ಪಡೆದಿರುವ ಸ್ಥಳಕ್ಕೆ ಅರಣ್ಯ ಮತ್ತು ಪಶುಪಾಲನೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ರೈತರ ಸಾಕು ಪ್ರಾಣಿಗಳನ್ನು ಚಿರತೆ ದಾಳಿ ನಡೆಸುತ್ತಿದೆ. ಇದರ ಉಪಟಳದಿಂದ ಗ್ರಾಮಸ್ಥರು ಆತಂಕದಿಂದ ಬದುಕುವಂತಾಗಿದೆ. ಕೃಷಿ ಕಾರ್ಯಮಾಡಲು ಜಮೀನುಗಳಿಗೆ ಹೋಗಲು ಭಯಗೊಂಡಿದ್ದು, ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಕಿವಿಗೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಚಿರತೆ ಸೆರೆಗೆ ಕ್ರಮ ವಹಿಸದಿದ್ದರೆ ಗ್ರಾಮಸ್ಥರ ಜತೆಗೂಡಿ ಅರಣ್ಯ ಇಕಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡ ಎಚ್.ಎಂ.ಶಿವಣ್ಣ ಎಚ್ಷರಿಕೆ ನೀಡಿದ್ದಾರೆ.