

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ
ಶನಿವಾರಸಂತೆ: ಜಾತ್ರೆ ಮತ್ತು ಉತ್ಸವಗಳು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಅವರು ಹಂಡ್ಲಿ ಗ್ರಾಪಂ ವ್ಯಾಪ್ತಿಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ 81ನೇ ವರ್ಷದ ಜಯದೇವ ಜಾನುವಾರುಗಳ ಜಾತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
80 ದಶಕಗಳ ಹಿಂದೆ ಜನರಿಗೆ ಮನರಂಜನೆಗಾಗಿ ವಿವಿಧ ರೀತಿಯ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ಸುಗ್ಗಿ ಕಾಲದಲ್ಲಿ ಜಾತ್ರೆ, ಉತ್ಸವಗಳನ್ನು ಆಚರಣೆ ಮಾಡುವ ಸಂಪ್ರದಾಯ ವಿಜೃಂಭಿಸುತ್ತಿತ್ತು. ಜನರಿಗೆ ಸಾಂಸ್ಕೃತಿಕ ಮನರಂಜನೆಯೊಂದಿಗೆ ಅನೇಕ ವಿಚಾರ ವಿನಿಮಯಗಳಾಗುತ್ತಿದ್ದವು. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸಂಪರ್ಕ ಸಾಧನಗಳ ಭರಾಟೆಯಲ್ಲಿ ಜಾತ್ರೋತ್ಸವಗಳ ವೈಭವ ಮರೆಯಾಗುತ್ತಿದೆ ಎಂದು ಸ್ವಾಮೀಜಿ ವಿಷಾದಿಸಿದರು. ಗುಡುಗಳಲೆ ಜಾನುವಾರುಗಳ ಜಾತ್ರೆಯಲ್ಲಿ ದನ ಕರುಗಳ ವಹಿವಾಟು ಕಡಿಮೆಯಾಗುತ್ತಿದ್ದರೂ ಜಾತ್ರಾ ಸಮಿತಿಯವರು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪುರಾತನ ಪದ್ಧತಿ ಕಾಪಾಡಲು ಶ್ರಮಿಸುತ್ತಿದ್ದಾರೆ.ಇದು ಶ್ಲಾಘನಿಯ ಕಾರ್ಯ ಎಂದು ಸ್ವಾಮೀಜಿ ಹೇಳಿದರು.
ಸಂಸ್ಕಾರ ಕಡಿಮೆಯಾಗುತ್ತಿದೆ: ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಅನೇಕರು ಇಂದು ವಿದ್ಯಾವಂತ ರಾಗುತ್ತಿದ್ದಾರೆ. ಸಮಾಜ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಬೆಳವಣಿಗೆಯಾಗುತ್ತಿದೆ. ಆದರೆ ಸಂಸ್ಕಾರ ಕಡಿಮೆಯಾಗುತ್ತಿದೆ ಎಂಬುದೇ ಬೇಸರ ಎಂದರು. ಮನೆಯಲ್ಲಿ ಮಕ್ಕಳು ಹೆಚ್ಚು ಹೆಚ್ಚು ಪದವಿ ಗಳಿಸಿ ಹಣ ಸಂಪಾದನೆ ಮಾಡುತ್ತಿದ್ದರೆ ಅತ್ತ ಮನೆಯ ಹಿರಿಯರು ವೃದ್ಧಾಶ್ರಮಕ್ಕೆ ಸೇರಿಕೊಳ್ಳುತ್ತಿರುವ ಸಂಖ್ಯೆಯೂ ಅಧಿಕವಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಯಾವ ಸಂಸ್ಕಾರವನ್ನು ಕೊಡುತ್ತಿದೆ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು. ಜಾನುವಾರುಗಳ ಜಾತ್ರೆ ಎಂಬುದೇ ಅಪರೂಪ ಆಗುತ್ತಿರುವಾಗ ಜಾತ್ರಾ ಸಮಿತಿಯವರು ಪುರಾತನ ಸಂಪ್ರದಾಯ ಮತ್ತು ಪದ್ಧತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಶ್ಲಾಘನಿಯ ಎಂದರು. ಕಲ್ಲಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗಬಾಋದು. ನಮ್ಮ ಧರ್ಮ, ಸಂಸ್ಕೃತಿ ಪಾಲನೆಗೆ ಮಹತ್ವ ನೀಡುವ ಗುಣ ರೂಢಿಸಿಕೊಳ್ಳಬೇಕು ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಸ್.ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರೆಯನ್ನು ಹಿಂದಿನ ವೈಭವವನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮಸ್ಥರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಶನಿವಾರಸಂತೆ ಠಾಣೆಯ ಎಸ್‌ಐ ಚಂದ್ರ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಜಾತ್ರಾ ಸಮಿತಿ ಉಪಾಧ್ಯಕ್ಷೆ ಚೈತ್ರಾ, ಕಾರ್ಯದರ್ಶಿ ಎಸ್.ಆರ್. ವೀರೇಂದ್ರಕುಮಾರ್, ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ, ಸದಸ್ಯೆ ಮಹದೇವಮ್ಮ, ಶನಿವಾರಸಂತೆ ಗ್ರಾಪಂಅಧ್ಯಕ್ಷೆ ಗೀತಾ, ದುಂಡಳ್ಳಿ ಗ್ರಾಪಂ ಸದಸ್ಯೆ ಪೂರ್ಣಿಮಾ, ಮುಖಂಡರಾದ ಕುಶಾಲಪ್ಪ, ಚಿದಾನಂದ, ಉಮಾಶಂಕರ, ಸೋಮಶೇಖರ್ ಹಾಜರಿದ್ದರು.
ದೇವರ ಉತ್ಸವ: ಜಾತ್ರೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಬುಧವಾರ ಬೆಳಗ್ಗೆ ಗುಡುಗಳಲೆ ಬಸವೇಶ್ವರ ದೇವಸ್ಥಾನದಿಂದ ವಾದ್ಯಗೋಷ್ಠಿ ಸಮೇತ ಶ್ರೀ ಬಸವಣ್ಣ ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ವೀರಗಾಸೆ, ನಂದಿಧ್ವಜ ಕುಣಿತದೊಂದಿಗೆ ಸುಮಂಗಲಿಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅಲಂಕೃತ ಬಸವನನ್ನು ಜಾತ್ರಾ ಮೈದಾನದಲ್ಲಿ ಮೊದಲು ಪ್ರವೇಶಿಸಿ ವಹಿವಾಟಿಗೆ ಚಾಲನೆ ನೀಡಲಾಯಿತು.