ಕೊಟ್ಟಿಗೆ ಛಾವಣಿ ಕುಸಿದು ಹಸು ಸಾವು

04 HANUR 3
ಪೊನ್ನಾಚಿ ಗ್ರಾಮದಲ್ಲಿ ಕೊಟ್ಟಿಗೆ ಛಾವಣಿ ಕುಸಿದು ನಾಗಮಾದಪ್ಪ ಎಂಬುವರಿಗೆ ಸೇರಿದ ಹಸು ಮೃತಪಟ್ಟಿರುವುದು.
Published on

ಹನೂರು: ಫೆಂಗಲ್ ಚಂಡಮಾರುತದ ಪರಿಣಾಮ ಸುರಿದ ಮಳೆಗೆ ತಾಲೂಕಿನ ಕಾಡಂಚಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕೊಟ್ಟಿಗೆಯ ಛಾವಣಿ ಕುಸಿದು ಹಸುವೊಂದು ಮೃತಪಟ್ಟಿದೆ.

ಗ್ರಾಮದ ನಾಗಮಾದಪ್ಪ ಎಂಬುವರು 2 ಹಸುಗಳನ್ನು ಸಾಕಿಕೊಂಡಿದ್ದು, ವಾಸಿಸುವ ಮನೆ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆದರೆ ಕಳೆದ 3 ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಗೆ ರಾತ್ರಿ ಛಾವಣಿ ಕುಸಿದಿದೆ. ಪರಿಣಾಮ ಹಸುವೊಂದು ಮೃತಪಟ್ಟಿದ್ದು, ಮತ್ತೊಂದು ಹಸು ಹೊರಕ್ಕೆ ಹೋಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಬೆಳಗ್ಗೆ ನಾಗಮಾದಪ್ಪ ಅವರು ಮನೆಯಿಂದ ಹೊರಬಂದು ನೋಡಿದಾಗ ಹಸು ಮೃತಪಟ್ಟಿರುವ ಬಗ್ಗೆ ತಿಳಿದು ಮರುಕ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಗ್ರಾಮ ಆಡಳಿತ ಅಧಿಕಾರಿ ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದರು.

ಈ ವೇಳೆ ಬಡತನದಲ್ಲಿ ವಾಸಿಸುತ್ತಿರುವ ನಮಗೆ ಹಸುವೇ ಮೂಲಾಧಾರವಾಗಿತ್ತು. ಆದರೆ ಹಸು ಮೃತಪಟ್ಟಿದ್ದು, ತುಂಬ ನಷ್ಟವಾಗಿದೆ. ಆದ್ದರಿಂದ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದರ ಜತೆಗೆ ಮನೆ ನಿರ್ಮಿಸುವಂತೆ ಮನವಿ ಮಾಡಿದರು.

ಪಶು ವೈದ್ಯಾಧಿಕಾರಿ ಭೇಟಿ: ಸುದ್ದಿ ತಿಳಿದು ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿದ್ದರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಸರ್ಕಾರದಿಂದ ನೀಡಲಾಗುವ ಪರಿಹಾರವನ್ನು ಒಂದು ವಾರದೊಳಗೆ ದೊರಕಿಸಿಕೊಡಲಾಗುವುದು ಎಂದು ನಾಗಮಾದಪ್ಪ ಅವರಿಗೆ ಭರವಸೆ ನೀಡಿದರು. ಜತೆಗೆ ಈ ಭಾಗದಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಜಾನುವಾರುಗಳ ರಕ್ಷಣೆಗೆ ರೈತರು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net