

ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ಹಸುಗೂಸಿನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡವನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಹೇಳಿದರು.
ತಾಲೂಕಿನ ಹರಳೆ ಗ್ರಾಮದ ಕಾವೇರಿ ನದಿಯಲ್ಲಿ ಸೋಮವಾರ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಎಸ್ಪಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯ ಮಗುವಿನ ಶವ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿದೆ. ಮಗುವಿನ ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ 1 ತಿಂಗಳ ಹಿಂದೆ ಹೆರಿಗೆಯಾಗಿರುವವರ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಬಳಿಯೂ ಬಾಣಂತಿಯರ ಮಾಹಿತಿ ಇರಲಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಮಗುವಿನ ವಾರಸುದಾರರು ಹಾಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗುತ್ತದೆ ಎಂದರು.
ಕೊಳ್ಳೇಗಾಲ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ, ಗ್ರಾಮಾಂತರ ಠಾಣೆ ಪಿಎಸ್‌ಐ ಸುಪ್ರೀತ್ ಮತ್ತಿತರರಿದ್ದರು.