

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಗೋಮಾತೆಗೆ ಪೂಜೆ ಸಲ್ಲಿಸಿ ವಿಜಯೇಂದ್ರ ಹೆಸರಿನಲ್ಲಿ ಹಸುವನ್ನು ದತ್ತು ತೆಗೆದುಕೊಂಡರು.
ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ಇರುವ ಪಿಂಜರಾಪೋಲ್‌ನಲ್ಲಿ ಗೋ ಪೂಜೆ ಸಲ್ಲಿಸಿ, ಹಸುಗಳಿಗೆ ಮೇವುಣಿಸಿದರು. ಗಿಡ ನೆಟ್ಟು, ಸಿಹಿ ವಿತರಿಸಿ ಮಾತನಾಡಿದ ಮಹದೇವಸ್ವಾಮಿ, ವಿಜಯೇಂದ್ರ ಅವರು ತಂದೆ ಯಡಿಯೂರಪ್ಪ ಅವರಂತೆ ರಾಜ್ಯದ ಜನತೆಯ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಸೇವೆ ಮಾಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ವರುಣ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಬಿ.ವೈ.ವಿಜಯೇಂದ್ರ ಅವರಿಗೆ ಸ್ಥಿರತೆಯನ್ನು ಕಟ್ಟಿಕೊಟ್ಟಿದೆ. ಇದನ್ನು ಆಗಾಗ್ಗೆ ಅವರೇ ಜನರ ಬಳಿ ಮಾತನಾಡುತ್ತಿರುತ್ತಾರೆ. ವರುಣ ಕ್ಷೇತ್ರದ ಜನರೂ ವಿಜಯೇಂದ್ರ ಅವರ ಸರಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ. ಯುವ ಸಮೂಹ ಅವರ ಬೆನ್ನೆಲುಬಾಗಿ ನಿಂತಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಶಕ್ತಿ ತುಂಬೋಣ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಂಗನಾಯಕ ಮಾತನಾಡಿ, ಯುವ ನೇತಾರ ವಿಜಯೇಂದ್ರ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಬೇಕು ಎನ್ನುವ ಉದ್ದೇಶದಿಂದ ಪಿಂಜರಾಪೋಲ್ನಲ್ಲಿ ಜಾನುವಾರುಗಳಿಗೆ ಮೇವು ನೀಡಿ ಪೂಜೆ ಸಲ್ಲಿಸಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಬಯಲಿಗೆಳೆದು ಹೋರಾಟ ಮಾಡುತ್ತಿರುವ ವಿಜಯೇಂದ್ರ ಅವರಿಗೆ ನಾವೆಲ್ಲರೂ ಶಕ್ಕಿ ತುಂಬಬೇಕು. ಅವರನ್ನು ಸಿಎಂ ಮಾಡಲು ಪಣ ತೊಡಬೇಕು ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ವಾಸು ಮಾತನಾಡಿ, ಬಿ.ವೈ.ವಿಜಯೇಂದ್ರ ಅವರ ಜನ್ಮ ದಿನವನ್ನು ಪಿಂಜರಾಪೋಲ್ನಲ್ಲಿ ಆಚರಿಸುವ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಅವರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಮುಂದಿನ ಮುಖ್ಯಮಂತ್ರಿಯಾಗಲೆಂದು ಸಂಕಲ್ಪ ಮಾಡಿದ್ದೇವೆ ಎಂದರು.
ವರುಣ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಆಲಗೂಡು ವೆಂಕಟರಮಣಶೆಟ್ಟಿ, ಪಿಂಜರಾಪೋಲ್ ಅಧ್ಯಕ್ಷ ಸುಭಾಷ್, ಮುಖಂಡರಾದ ವರುಣ ಮಧು, ನಗರ್ಲೆ ನಿರಂಜನ್, ಮಹದೇವಸ್ವಾಮಿ, ರಾಜು, ರೂಪ ರಾಮ್,ಕಿಶೋರ್‌ಸಿಂಗ್ ಇತರರು ಇದ್ದರು.