

ಕರೊನಾ ಸೋಂಕು ಹರಡಲು ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲು ಯತ್ನಿಸಿದವರು ಮಂಗಳೂರಿನ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ. ವಾಸ್ತವಕ್ಕೆ ಹತ್ತಿರವಾದ ಹಲವು ವಿಚಾರಗಳನ್ನು ಜನರಿಗೆ ತಲುಪಿಸುತ್ತಿರುವ ಅವರ ಜತೆ ‘ವಿಜಯವಾಣಿ’ ನಡೆಸಿದ ಮಾತುಕತೆ ವಿವರ ಇಲ್ಲಿದೆ.
-ಹರೀಶ್ ಮೋಟುಕಾನ ಮಂಗಳೂರು ಕರೊನಾ ಗಾಬರಿ ಪಡುವ ಗಂಭೀರ ಸ್ವರೂಪದ ರೋಗವಲ್ಲ. ಮಧುಮೇಹ, ಮೂತ್ರಪಿಂಡದ ಸಮಸ್ಯೆ, ಶ್ವಾಸಕೋಶದ ತೊಂದರೆ ಮೊದಲಾದ ರೋಗಗಳಿಗೆ ತುತ್ತಾದವರಿಗೆ ಕರೊನಾ ಸೋಂಕು ಬಾಧಿಸಿದರೆ ಮಾತ್ರ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ನಡೆಸಿ, ಚಿಕಿತ್ಸೆ ಪಡೆಯಬೇಕು. ಉಳಿದವರು ಮನೆಯಲ್ಲೇ ಇದ್ದು, ಯಾವುದೇ ಔಷಧ ಇಲ್ಲದೆ ಗುಣವಾಗಬಹುದು. ಕರೊನಾ ಸೋಂಕು 30 ವರ್ಷದೊಳಗಿನ ಶೇ.95ರಷ್ಟು ಮಂದಿಗೆ ರೋಗ ಲಕ್ಷಣ ಇಲ್ಲದೆ ಬಂದು ಹೋಗುತ್ತದೆ. ಶೇ.4ರಷ್ಟು ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಶೇ.1ರಷ್ಟು ಮಂದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳಬಹುದು. ಆದ್ದರಿಂದ ಶೇ.1ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಡಿಸಿ, ಚಿಕಿತ್ಸೆ ಪಡೆಯುವುದು ಸೂಕ್ತ. ಗಂಭೀರ ಕಾಯಿಲೆ ಇಲ್ಲದವರು ರೋಗ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಅದಕ್ಕೆ ಆಸ್ಪತ್ರೆಯಲ್ಲೂ ಯಾವುದೇ ಚಿಕಿತ್ಸೆ ಇಲ್ಲ. ಮನೆಯಲ್ಲೇ ಪ್ರತ್ಯೇಕವಾಗಿರುವುದು ಹೆಚ್ಚು ಸೂಕ್ತ. ಕರೊನಾ ಬಗ್ಗೆ ಬಹುತೇಕ ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳು ಸರಿಯಾದ ರೀತಿ ಅರ್ಥ ಮಾಡಿಕೊಂಡಿಲ್ಲ. ಹಾಗಾಗಿ ಆಸ್ಪತ್ರೆಗಳಲ್ಲೂ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದೆ. ಅವರು ಅರ್ಥ ಮಾಡಿಕೊಂಡು ಸರ್ಕಾರಕ್ಕೆ ಸ್ಪಷ್ಟವಾಗಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದರೆ ಜನರು ಇಷ್ಟೊಂದು ಗಾಬರಿ ಪಡುತ್ತಿರಲಿಲ್ಲ. ಸರ್ಕಾರಕ್ಕೂ ಏನು ಮಾಡಬೇಕು ಎನ್ನುವ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿತ್ತು.
ಹಿರಿಯರು ಪ್ರತ್ಯೇಕವಾಗಿರಲಿ: ಮನೆಯಲ್ಲಿ ಹಿರಿಯರು ಆದಷ್ಟು ಪ್ರತ್ಯೇಕವಾಗಿದ್ದರೆ ಕ್ಷೇಮ. 40 ವರ್ಷದೊಳಗಿನವರಿಗೆ ಕರೊನಾ ವೈರಸ್ ಸೋಂಕು ಹರಡಿದರೂ ರೋಗ ಲಕ್ಷಣ ಇಲ್ಲದೆ ಕಡಿಮೆಯಾಗುತ್ತದೆ. ಹಿರಿಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಲ್ಲಿ ಲಕ್ಷಣಗಳು ಗೋಚರಿಸುತ್ತದೆ. ಇದರಿಂದ ಗಾಬರಿ ಪಡುವ ಸಂದರ್ಭ ಹೆಚ್ಚು.
ಸಕ್ಕರೆ ಪದಾರ್ಥ ಸೇವಿಸಬೇಡಿ: ಸೋಂಕಿತರು ಸಕ್ಕರೆ ಅಂಶ ಇರುವ ಪದಾರ್ಥಗಳನ್ನು ದೂರ ಇಡುವುದು ಉತ್ತಮ. ಪಲ್ಸ್ ಆಕ್ಸಿಮೀಟರ್ ಮೂಲಕ ರಕ್ತದ ಆಮ್ಲಜನಕದ ಮಟ್ಟವನ್ನು ಅಳೆದು ಶೇ.95ರ ಪ್ರಮಾಣಕ್ಕಿಂತ ಕಡಿಮೆ ಇದ್ದವರು ಹೆಚ್ಚು ಜಾಗ್ರತೆಯಿಂದ ಇದ್ದು, ವೈದ್ಯರ ಸಲಹೆ ಪಡೆಯುವುದು ಉತ್ತಮ. ಇಂತಹ ಮಾಪನವನ್ನು ಸಂಘ ಸಂಸ್ಥೆಗಳು ಖರೀದಿಸಿ ಸಾರ್ವಜನಿಕರ ರಕ್ತದ ಆಮ್ಲಜನಕ ಮಟ್ಟ ತಪಾಸಣೆ ನಡೆಸುವುದು ಹೆಚ್ಚು ಉಪಯುಕ್ತ.
ಕರೊನಾ ಸೋಂಕಿತರು ಗಂಭೀರ ಸಮಸ್ಯೆಗಳಿಲ್ಲದಿದ್ದರೆ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದರೆ ಆಸ್ಪತ್ರೆಗಳಲ್ಲೂ ಹೆಚ್ಚಿನ ಒತ್ತಡ ಆಗುವುದಿಲ್ಲ. ವೈದ್ಯರಿಗೆ ಗಂಭೀರ ಸ್ವರೂಪದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವಲ್ಲಿ ವೈದ್ಯರು, ಸರ್ಕಾರ, ಮಾಧ್ಯಮಗಳ ಕಡೆಯಿಂದ ಲೋಪವಾಗಿದೆ. - ಡಾ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ, ಮಂಗಳೂರು