ಪಾಪ, ಇವರಿಗೆ ಸಂಬಳ ಬರೋದೇ ಮೂರು ತಿಂಗಳಿಗೊಮ್ಮೆ!

Covid Warriors
Published on

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಕರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ದುಡಿಯುತ್ತಿರುವ ಕರೊನಾ ಸೇನಾನಿಗಳಾದ ಆರೋಗ್ಯ ಸಹಾಯಕರು 3 ತಿಂಗಳಿಗೊಮ್ಮೆ ಸಂಬಳ ಪಡೆಯುತ್ತಿದ್ದು ಸಂಸಾರದ ನೊಗ ಹೊರಲು ಬೇರೆಯವರ ಬಳಿ ಸಾಲಕ್ಕಾಗಿ ಕೈಚಾಚಬೇಕಾದ ಪರಿಸ್ಥಿತಿಗೆ ತುತ್ತಾಗಿದ್ದಾರೆ.

ಮಾರ್ಚ್‌ನಿಂದ 3 ತಿಂಗಳಿಗೊಮ್ಮೆ ಸಂಬಳ ಆಗುತ್ತಿದ್ದು ನಿಗದಿತ ಸಮಯಕ್ಕೆ ಒಮ್ಮೆಯೂ ವೇತನ ಪಡೆದಿಲ್ಲ. ಕಳೆದ 8 ತಿಂಗಳಲ್ಲಿ ಒಂದು ದಿನವೂ ರಜೆ ಇಲ್ಲದೆ ದುಡಿಯುತ್ತಿರುವ ಸಹಾಯಕರಿಗೆ ಕೊನೇಪಕ್ಷ ತಿಂಗಳಿಗೊಮ್ಮೆಯಾದರೂ ವೇತನ ಬಿಡುಗಡೆ ಮಾಡಿ ‘ಚೈತನ್ಯ’ ತುಂಬುವ ಕೆಲಸವನ್ನು ಸರ್ಕಾರ ಮಾಡಿಲ್ಲ.

ನಿನ್ನೆ, ಮೊನ್ನೆ ಸಮಸ್ಯೆ ಅಲ್ಲ!: ಜಿಲ್ಲೆಯ 120 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 576 ಕಿರಿಯ ಆರೋಗ್ಯ ಸಹಾಯಕರು ಸೇವೆ ಸಲ್ಲಿಸುತ್ತಿದ್ದು ಪುರುಷ ಕಿರಿಯ ಆರೋಗ್ಯ ಸಹಾಯಕರ ಜತೆ ಎಎನ್‌ಎಂ ಗಳಾಗಿದ್ದವರನ್ನು ಮಹಿಳಾ ಕಿರಿಯ ಆರೋಗ್ಯ ಸಹಾಯಕರಾಗಿ ಪದೋನ್ನತಿ ಸಹ ನೀಡಲಾಗಿದೆ. ಪಲ್ಸ್ ಪೊಲಿಯೊ, ರಾಷ್ಟ್ರೀಯ ಜಂತುಹುಳು ದಿನ, ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ದಿನ, ತಾಯಿ ಮತ್ತು ಮಕ್ಕಳ ಯೋಜನೆ ಸೇರಿ 18 ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೊಡಗಿಕೊಂಡಿರುವ ಆರೋಗ್ಯ ಸಹಾಯಕರ ವೇತನ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ.

ಅನುದಾನ ಬಿಡುಗಡೆ ವಿಳಂಬ: ಕೇಂದ್ರ ಸರ್ಕಾರದ ಪ್ರಾಯೋಗಿಕ ಕಾರ್ಯಕ್ರಮದಡಿ ನೀಡುವ ಬಜೆಟ್‌ನಲ್ಲಿ ಆರೋಗ್ಯ ಸಹಾಯಕರಿಗೆ 0-03 ಲೆಕ್ಕ ಶೀರ್ಷಿಕೆ ಅಡಿ ವೇತನ ನೀಡಲಾಗುವುದು. ಜಿಪಂ ಮೂಲಕ ಆರೋಗ್ಯ ಸಹಾಯಕರಿಗೆ ವೇತನ ನೀಡಲಾಗುತ್ತಿದ್ದು ಅನುದಾನ ಬಿಡುಗಡೆಯಲ್ಲಿನ ವಿಳಂಬದಿಂದ 3 ತಿಂಗಳಿಗೊಮ್ಮೆ ಆರೋಗ್ಯ ಸಹಾಯಕರು ವೇತನ ಪಡೆಯಬೇಕಾಗಿದೆ. ಪ್ರತೀ ತಿಂಗಳು ಮನೆ ಬಾಡಿಗೆ ಕಟ್ಟಲು, ದಿನಸಿಗಾಗಿ, ಹಬ್ಬಹರಿದಿನ ಸಂದರ್ಭಗಳಲ್ಲಿ ಹಣಕ್ಕಾಗಿ ಇನ್ನೊಬ್ಬರ ಹತ್ತಿರ ಸಾಲಸೋಲ ಮಾಡಬೇಕಾದ ಪರಿಸ್ಥಿತಿ ಇದೆ.

ಗೌರವಧನಕ್ಕೆ ಪರಿಗಣಿಸಿಲ್ಲ: 8 ತಿಂಗಳಿನಿಂದ ಆರೋಗ್ಯ ಸಹಾಯಕರಿಗೆ ಒಂದು ದಿನ ರಜೆ ಸಿಕ್ಕಿಲ್ಲ. ಜಿಲ್ಲಾಸ್ಪತ್ರೆ ಸೇರಿ ಕೋವಿಡ್ ಕೇಂದ್ರಗಳಲ್ಲಿ ದುಡಿಯುತ್ತಿರುವ ಡಿ.ಗ್ರೂಪ್, ಸ್ಟಾಫ್ ನರ್ಸ್‌ಗಳಿಗೆ 10 ಸಾವಿರ ಗೌರವಧನವನ್ನು ಸರ್ಕಾರ 3 ತಿಂಗಳಿನಿಂದ ನೀಡುತ್ತಿದೆ. ಅದೇ ರೀತಿ, ಲ್ಯಾಬ್ ಟೆಕ್ನಿಷಿಯನ್‌ಗಳಿಗೆ 15 ಸಾವಿರ ರೂ. ಗೌರವಧನ ನೀಡುವ ಪ್ರಸ್ತಾವನೆಗೂ ಸರ್ಕಾರ ಒಪ್ಪಿದೆ. ಆದರೆ, ಕರೊನಾ ಹೋರಾಟದಲ್ಲಿ ತಳಮಟ್ಟದಲ್ಲಿ ದುಡಿಯುತ್ತಿರುವ ಆರೋಗ್ಯ ಸಹಾಯಕರನ್ನು ಕಡೆಗಣಿಸಲಾಗಿದೆ.

ಈ ಸಮಸ್ಯೆ ಬಹಳ ದಿನದಿಂದ ಇದೆ, ಹೊಸದೇನಲ್ಲ. ಕೇಂದ್ರದ ಅನುದಾನದಲ್ಲಿ ಆರೋಗ್ಯ ಸಹಾಯಕರಿಗೆ ವೇತನ ನೀಡುತ್ತಿದ್ದು ವಿಳಂಬವಾಗುತ್ತಿದೆ. ಕಳೆದ ತಿಂಗಳ ವೇತನವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

| ಡಾ.ನಾಗೇಂದ್ರಪ್ಪ  ಜಿಲ್ಲಾ ಆರೋಗ್ಯಾಧಿಕಾರಿ

ಜಂತುಹುಳು ಮಾತ್ರೆಯನ್ನು ಮನೆ, ಮನೆಗೆ ತಲುಪಿಸುತ್ತೇವೆ. ಜತೆಗೆ 8 ತಿಂಗಳಿನಿಂದ 1 ದಿನ ರಜೆ ಪಡೆಯದೆ ಕರೊನಾ ಸೋಂಕಿತರ ಮಾಹಿತಿ ಪಡೆದು ಅವರ ಸಂಪೂರ್ಣ ನಿಗಾವಹಿಸಿದ್ದೇವೆ. ಪ್ರಾಥಮಿಕ, ದ್ವೀತಿಯ ಹಂತದ ಸಂಪರ್ಕಿತರು, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಹೊರಜಿಲ್ಲೆ, ರಾಜ್ಯಗಳಿಂದ ಬರುವವರ ಮಾಹಿತಿಯನ್ನು ಮನೆ, ಮನೆಗೆ ಭೇಟಿ ನೀಡಿ ಕಲೆಹಾಕುತ್ತೇವೆ. ಈ ಸಂದರ್ಭದಲ್ಲಿ ಪ್ರಾಣ ಲೆಕ್ಕಕ್ಕಿಡದೆ ಕೆಲಸ ಮಾಡುತ್ತೇವೆ. ಆದರೂ, 3 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ.

| ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಸಹಾಯಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net