

ವೇಣುವಿನೋದ್ ಕೆ.ಎಸ್.ಮಂಗಳೂರು
ಜನವರಿ ಮೊದಲ ಅಥವಾ ಎರಡನೇ ವಾರ ಕೋವಿಡ್ ಲಸಿಕೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ಜಿಲ್ಲೆಯ 40 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಸಿಬ್ಬಂದಿಗೆ ಆದ್ಯತೆ. ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ನರ್ಸ್‌ಗಳು, ವೈದ್ಯರು, ಗ್ರೂಪ್ ಡಿ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿಯನ್ನೆಲ್ಲ ಸೇರಿಸಿ ಪಟ್ಟಿ ಮಾಡಲಾಗಿದೆ. ಇವರಿಗೆ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ನೀಡಲು ಜಿಲ್ಲೆಯಲ್ಲಿ 4,667 ವ್ಯಾಕ್ಸಿನೇಟರ್‌ಗಳನ್ನು ಗುರುತಿಸಲಾಗಿದೆ. ಆದರೆ ಅವರಿಗೆ ತರಬೇತಿ ನಿಡಬೇಕಿದೆ. ಅದಕ್ಕೆ ಬೆಂಗಳೂರಿನಿಂದಲೇ ಮಾಸ್ಟರ್ ಟ್ರೈನರ್ಸ್ ಆಗಮಿಸಲಿದ್ದಾರೆ.
ಲಸಿಕೆಗಳ ಸಾಗಾಟಕ್ಕೆ ಬೇಕಾದ ವ್ಯಾನ್, ಡೀಪ್ ಫ್ರೀಜರ್ಸ್, ಐಎಲ್‌ಆರ್(ಐಸ್ ಲೈನ್ಡ್ ರೆಫ್ರಿಜರೇಟರ್ಸ್-2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರ್ವಹಣೆಗೆ), ಡೀಪ್ ಫ್ರೀಜರ್ಸ್(ಮೈನಸ್ 5ರಿಂದ ಮೈನಸ್ 10ರವರೆಗಿನ ತಾಪಮಾನ ನಿರ್ವಹಣೆಗೆ), ವಾಕ್ ಇನ್ ಕೂಲರ್ಸ್ ಸಜ್ಜಾಗಿವೆ. ಮಕ್ಕಳ ಲಸಿಕೆ ಕಾರ್ಯಕ್ರಮಕ್ಕೆ ಬಳಸುವ ಸೌಲಭ್ಯವನ್ನೇ ಇದಕ್ಕೂ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದ್ದಾರೆ.
ಎರಡನೇ ಹಂತದಲ್ಲಿ ಪೊಲೀಸ್
ಮೊದಲ ಹಂತದ ಲಸಿಕಾ ಕಾರ್ಯಕ್ರಮ ಬಳಿಕ ಎರಡನೇ ಹಂತದಲ್ಲಿ ಮುಂಚೂಣಿ ಸಿಬ್ಬಂದಿಗಳಾದ ಪೊಲೀಸ್, ರಕ್ಷಣಾ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಲಸಿಕೆ ನೀಡಲಾಗುತ್ತದೆ. ಮೂರನೇ ಹಂತದಲ್ಲಿ 50ರ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಆದರೆ ಜಿಲ್ಲೆಯಲ್ಲಿ ಎರಡನೇ ಮತ್ತು ಮೂರನೇ ಹಂತದವರ ಸಂಖ್ಯೆ ಎಷ್ಟು ಎಂಬ ಮಾಹಿತಿ ಕಲೆಹಾಕಲು ಸೂಚನೆ ಬಂದಿಲ್ಲ.
ಎರಡನೇ ಅಲೆಯ ಸೂಚನೆ ಇಲ್ಲ
ಜಿಲ್ಲೆಯಲ್ಲಿ ಸದ್ಯ ದಿನಕ್ಕೆ ಸರಾಸರಿ 25-30 ಕೋವಿಡ್ ಪ್ರಕರಣ ವರದಿಯಾಗುತ್ತಿದೆ. ನವರಾತ್ರಿ, ದೀಪಾವಳಿಯಿಂದೀಚೆಗೆ ಜನ ಸಂದಣಿ ಏರತೊಡಗಿದೆ. ಆದರೆ ಈವರೆಗೆ ಎರಡನೇ ಕೋವಿಡ್ ಅಲೆಯ ಸೂಚನೆ ಇಲ್ಲ. ಆದರೆ ಜನರು ಮೈಮರೆಯದೆ ಇನ್ನೂ ಕೆಲ ತಿಂಗಳ ಕಾಲ ಸಂಯಮ ವಹಿಸಿ ಎಲ್ಲ ಕೊವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.
ಪಲ್ಸ್ ಪೋಲಿಯೋದಂತಹ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಕಾರಣ, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಕೋಲ್ಡ್‌ಸ್ಟೋರೇಜ್ ವ್ಯವಸ್ಥೆ ಇದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಅನುಕೂಲತೆಗಳಿವೆ. ನಮ್ಮಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯಬೇಕಾದವರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಗಿದೆ.
ಡಾ.ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ, ದ.ಕ
ಉಡುಪಿಯಲ್ಲಿ 14 ಸಾವಿರ ಮಂದಿಗೆ
ಉಡುಪಿ ಜಿಲ್ಲೆಯಲ್ಲಿ 14 ಸಾವಿರ ಮಂದಿಗೆ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಆರೋಗ್ಯ ಸಿಬ್ಬಂದಿಗೆ ಪ್ರಥಮ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಲಸಿಕೆ ಸಂಗ್ರಹಕ್ಕೆ ಡಿಎಚ್‌ಒ ಕಚೇರಿ ಸಮೀಪದ ಆರೋಗ್ಯ ಇಲಾಖೆ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುಖೇನ ಪೂರ್ವಸಿದ್ಧತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.