ಕೋವಿಡ್ ಚಿಕಿತ್ಸೆಗೆ ಕುಂದಾಪುರ ಮಾದರಿ

IMG-20210518-WA0040
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಈವರೆಗೆ ಕುಂದಾಪುರ ತಾಲೂಕಲ್ಲಿ ಕರೊನಾ ಚಿಕಿತ್ಸೆ ಪಡೆದ 3,000 ಜನರಲ್ಲಿ ಮೃತಪಟ್ಟವರು ಕೇವಲ ಐವತ್ತು ಮಂದಿ. ಹೆಚ್ಚಿನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ದಾಖಲಾದವರು ಎನ್ನುವುದು ವಿಶೇಷ. ಹಲವು ಪ್ರಥಮಗಳ ಕುಂದಾಪುರ ಕೋವಿಡ್ ಆಸ್ಪತ್ರೆ ಅತೀ ಕಡಿಮೆ ಮರಣ ಸಂಖ್ಯೆ ಲಿಸ್ಟ್‌ನಲ್ಲಿದೆ !

ಕುಂದಾಪುರ ಕರೊನಾ ಪರಿಸ್ಥಿತಿ ನಿಯಂತ್ರಿಸುವಲ್ಲಿ ತಾಲೂಕು ಆರೋಗ್ಯಾಧಿಕಾರಿಯಿಂದ ತೊಡಗಿ ಕೋವಿಡ್ ಆಸ್ಪತ್ರೆಯಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು, ಆರೋಗ್ಯ ಸಹಾಯಕರು, ಸಿಬ್ಬಂದಿ ಪ್ರಯತ್ನವಿದೆ. ಆರೋಗ್ಯಾಧಿಕಾರಿ 35 ಲಕ್ಷಕ್ಕೂ ಮಿಕ್ಕಿ ಅನುದಾನದ ಮೂಲಕ ಕರೊನಾ ಚಿಕಿತ್ಸೆಗೆ ಬೇಕಾಗುವ ಪರಿಕರ ಒದಗಿಸಿದರೆ, ಮೊಬೈಲ್ ಟೆಸ್ಟಿಂಗ್ ಮೂಲಕ ಉಡುಪಿ ಮಾದರಿ ಎನ್ನುವ ಹೆಗ್ಗಳಿಕೆ ಸಿಕ್ಕಿದೆ.
ಅರ್ಜಿ ಹಾಕಿ ಬಂದರು: ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆಗಾಗಿ ವೈದ್ಯರ ಕೊರತೆ ಇತ್ತು. ತಾತ್ಕಾಲಿಕ ಸೇವೆಗಾಗಿ ಸರ್ಕಾರ ಅರ್ಜಿ ಕರೆದಿದ್ದು, ಕರೊನಾ ಭಯದಿಂದ ಯಾರೂ ಮುಂದೆ ಬಾರದಿದ್ದಾಗ ಮುಂದೆ ಬಂದವರು ಡಾ.ಆಶಿತ್, ಡಾ.ರಜತ್, ಡಾ.ರಚನಾ ಹಾಗೂ ಡಾ.ನಿವೇದಿತಾ. ಸಾವು-ಬದುಕಿನ ನಡುವೆ ಇದ್ದವರಿಗೆ ಚಿಕಿತ್ಸೆ ಅಷ್ಟೇ ಅಲ್ಲದೆ ಧೈರ್ಯ ಹೇಳುವ ಮೂಲಕ ಮತ್ತೆ ಬದುಕಿನ ಕನಸು ಕಟ್ಟಿದವರು ಈ ವೈದ್ಯರು.
ಕೋವಿಡ್ ಕರ್ತವ್ಯದಲ್ಲಿರುವ ವೈದ್ಯ ಸಹೋದರರಾದ ಡಾ.ಆಶಿತ್, ಡಾ.ರಜತ್ ಅವರ ತಂದೆ ಬಡಾಬೈಲ್ ದಿ.ರತ್ನಾಕರ ಶೆಟ್ಟಿ ಮುಂಬೈ ಉದ್ಯಮಿ. ಮತ್ತೊಬ್ಬ ವೈದ್ಯೆ ರಚನಾ ಅವರ ತಂದೆ ಮರಾಠ ಸುರೇಶ್ ಶೆಟ್ಟಿ ಮುಂಬೈಯಲ್ಲಿ ಹೋಟೆಲ್ ಉದ್ಯಮಿ. ಡಾ.ನಿವೇದಿತಾ ಕುಂದಾಪುರ ಹವಲ್ದಾರ್ ಕುಟುಂಬದವರು. ಡಾ.ಆಶಿತ್, ಡಾ.ರಜತ್ ಕೋವಿಡ್ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ವಿಜಯಶಂಕರ್, ಡಾ.ಶ್ರಾವ್ಯ, ಡಾ.ನಿರ್ಮಲಾ, ಡಾ.ವಿಪುಲ್, ಆರೋಗ್ಯ ಸಹಾಯಕಿಯರಾದ ಆಶಾ ಸುವರ್ಣ, ನಯನಾ, ಮಮತಾ ನಾಯ್ಕ, ಮಮತಾ ಕರ್ಕೇರ, ಗಾಯತ್ರಿ ಹೆಗಡೆ ಕರೊನಾ ವಿರುದ್ಧ ಹೋರಾಟದಲ್ಲಿ ಮೊದಲ ಸಾಲಿನ ಯೋಧರು.

ಜೀವ ಉಳಿದಿದೆ ಎನ್ನೋದು ಸಮಾಧಾನ
ಸೋಂಕಿತರು ಗುಣವಾಗಿ ಮನೆಗೆ ಹೋಗುವಾಗ ಹೇಳುವ ಥ್ಯಾಂಕ್ಸ್ ಎಲ್ಲ ನೋವನ್ನು ಮರೆಸುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಾಗ ಅತ್ಯಂತ ನೋವು ತರುತ್ತಿತ್ತು ಎಂದು ಕುಂದಾಪುರ ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ನಾಗೇಶ್ ಹೇಳಿದ್ದಾರೆ. ಮೊದಲು ಪರೀಕ್ಷೆ ಮಾಡಿಸಿಕೊಳ್ಳಿ, ಕೋವಿಡ್ ಕೇರ್ ಸೆಂಟರ್ ಸೇರಿ, ಕೊನೇ ಕ್ಷಣ ಬಂದರೆ ಜೀವ ಉಳಿಸುವುದು ಸವಾಲು. ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ವಯಸ್ಸಾದವರು. ಹೆಚ್ಚು ಜನರ ಜೀವ ಉಳಿದಿದೆ ಎಂಬುದು ಸಮಾಧಾನ’ ಎಂದರು.

ಕರೋನಾ ಪರೀಕ್ಷೆ ಜನರಿದ್ದಲ್ಲೇ ಮಾಡುವ ಉದ್ದೇಶದಿಂದ ಮೊಬೈಲ್ ಆಂಬುಲೆನ್ಸ್ ಮೊದಲು ಆರಂಭವಾಗಿದ್ದು ಕುಂದಾಪುರದಲ್ಲಿ. ಸುಸಜ್ಜಿತ ಕರೊನಾ ಕೇರ್ ಸೆಂಟರ್ ಆರಂಭಿಸಿದ್ದು, ರೋಟರಿ, ರೆಡ್‌ಕ್ರಾಸ್, ಲಯನ್ಸ್ ಸಂಸ್ಥೆ ನೆರವು ಮರೆಯುವಂತಿಲ್ಲ. ರೋಟರಿ ಮೂಲಕ ಆದರ್ಶ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಮಾಡಲಾಗುತ್ತದೆ. ಇದೇ ತಿಂಗಳು ಆಕ್ಸಿಜನ್ ಪ್ಲಾಂಟ್ ಕೆಲಸ ಆರಂಭಿಸಲಿದ್ದು, ಪ್ರಾಣವಾಯು ಸಮಸ್ಯೆ ಆಗೋದಿಲ್ಲ. ಭಯ ಬಿಟ್ಟು, ಪರೀಕ್ಷೆ ನಡೆಸಿಎಲ್ಲರೂ ಸಹಕರಿಸಿ ಕರೊನಾ ನಿಯಂತ್ರಿಸಬೇಕು.
ಡಾ.ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ


ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದ ತಂದೆಯವರ ಸೇವಾ ಕಾರ್ಯಗಳೇ ನನಗೆ ಪ್ರೇರಣೆ. ಕರೊನಾ ಎನ್ನುವ ಆತಂಕದ ನಡುವೆಯೂ, ಅಮ್ಮ ಹಾಗೂ ಮನೆಯವರ ಪ್ರೋತ್ಸಾಹ- ಉತ್ಸಾಹ ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ನೀಡುತ್ತಿದೆ. ಕರೊನಾ ಎಂದರೆ ಬದುಕೇ ಮುಗಿಯಿತು ಎನ್ನುವ ಭಯ ಬಿಟ್ಟು ಧೈರ್ಯದಿಂದ ಎದುರಿಸಬೇಕು.
ಡಾ. ರಚನಾ. ವೈದ್ಯಾಧಿಕಾರಿ, ಕೋವಿಡ್ ಆಸ್ಪತ್ರೆ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net