ದಿನಕ್ಕೆ ಒಂದು ಸಾವಿರ ಟೆಸ್ಟ್

covid-25
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆಯನ್ನು ಹೆಚ್ಚು ಮಾಡಬೇಕಾದ ಅವಶ್ಯಕತೆಯಿದೆ. ದಿನಕ್ಕೆ ಸರಾಸರಿ ಸಾವಿರ ಮಂದಿಯನ್ನು ಪರೀಕ್ಷಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನೊಳಗೊಂಡು ಮಂಗಳವಾರ ಬೆಂಗಳೂರಿನ ವಿಕಾಸಸೌಧ ಕಚೇರಿ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳ ತಂಡ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಮುಖರಿಗೆ ಈ ಸೂಚನೆ ನೀಡಿದ್ದಾರೆ.

ಪ್ರಸ್ತುತ ವೆನ್ಲಾಕ್, ಅತ್ತಾವರ ಕೆಎಂಸಿ, ದೇರಳಕಟ್ಟೆ ಕೆಎಸ್ ಹೆಗ್ಡೆ, ಯೇನೆಪೋಯ ಆಸ್ಪತ್ರೆಗಳಲ್ಲಿ ಲ್ಯಾಬ್ ವ್ಯವಸ್ಥೆಯಿದೆ. ದಿನಕ್ಕೆ ಸರಾಸರಿ 500 ಟೆಸ್ಟ್ ನಡೆಯುತ್ತಿವೆ. 204 ಆಕ್ಸಿಜನ್ ಸಿಲಿಂಡ್, 13,500 ರ‌್ಯಾಪಿಡ್ ಟೆಸ್ಟಿಂಗ್ ಕಿಟ್, 57 ಆಂಬುಲೆನ್ಸ್, 143 ವೆಂಟಿಲೇಟರ್ ಲಭ್ಯವಿದೆ. ಹೊಸದಾಗಿ ಬಂದಿರುವ ವೆಂಟಿಲೇಟರ್‌ಗಳ ಜೋಡಣೆ ಪ್ರಕ್ರಿಯೆ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲೆಯ ಪರವಾಗಿ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ವಿಚಾರವಾಗಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತರ ಕಾರ್ಯದಕ್ಷತೆಯನ್ನು ಸಚಿವರು ಶ್ಲಾಘಿಸಿದರು.

ಅಪಪ್ರಚಾರ ವಿರುದ್ಧ ಕಠಿಣ ಕ್ರಮ: ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ವಿಚಾರವಾಗಿ ಅಪಪ್ರಚಾರ ಮತ್ತು ಸುಳ್ಳು ಮಾಹಿತಿಗಳ ಹರಡಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದು ಹಾಗೂ ಕೋವಿಡ್ ಸೋಂಕಿತರಿಗೆ ಅವಮಾನ ಮಾಡುವುದು ಅಕ್ಷಮ್ಯ ಅಪರಾಧ. ಜತೆಗೆ ಕೋವಿಡ್ ಸೇನಾನಿಗಳ ವಿರುದ್ಧ ಗೊಂದಲ ಸೃಷ್ಟಿಸುವ ಪ್ರಕರಣಗಳು ನಡೆಯುತ್ತಿವೆ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಆದೇಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net