

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಹಾಗೂ ನಟ ದರ್ಶನ್ ಸೇರಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ತಲಾ 250 ರೂ. ದಂಡ ವಿಧಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು ಮೆಮೋ ಸಲ್ಲಿಸಿ, ಆರ್.ಆರ್.ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರ‌್ಯಾಲಿಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲಿಸದೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಗಳ ಸಂಬಂಧ 18 ಎನ್‌ಸಿಆರ್ ದಾಖಲಿಸಲಾಗಿದೆ. ನಟ ದರ್ಶನ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಿಎಂ ಸಿದ್ದರಾಮಯ್ಯ, ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಸಂಸದ ಡಿ.ಕೆ. ಸುರೇಶ್ ಸೇರಿ ಒಟ್ಟು 684 ಜನರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಮೆಮೋದಲ್ಲೇನಿದೆ?: ಸೆ.30ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರ ಬಿಜೆಪಿ ಕಚೇರಿ ವರೆಗೆ ನಡೆದ ಬೈಕ್ ರ‌್ಯಾಲಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ವಿವರ ಹಾಗೂ ದೇವನಹಳ್ಳಿ ಜೆಎಂಎಸ್‌ಸಿ ಮತ್ತು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಪೊಲೀಸರು ದಾಖಲಿಸಿರುವ ದೂರಿನ ಪ್ರತಿಗಳನ್ನು ಕೋರ್ಟ್‌ಗೆ ಸಲ್ಲಿಸಲಾಯಿತು. ಜತೆಗೆ, ಆರ್.ಆರ್. ನಗರ ಚುನಾವಣೆ ವೇಳೆ ನಿಯಮ ಉಲ್ಲಂಸಿದವರ ವಿರುದ್ಧ ಕೈಕೊಂಡ ಕ್ರಮಗಳ ವಿವರಗಳನ್ನೂ ನ್ಯಾಯಪೀಠಕ್ಕೆ ಒದಗಿಸಲಾಯಿತು.
ರ‌್ಯಾಲಿ ವೇಳೆ ಕೋವಿಡ್ ನಿಯಮ ಉಲ್ಲಂಸಿದ್ದಕ್ಕೆ ತೇಜಸ್ವಿ ಸೂರ್ಯ ಅವರಿಗೆ ನ.7ರಂದು 250 ರೂ. ದಂಡ ವಿಧಿಸಲಾಗಿದ್ದು, ಆರ್.ಆರ್. ನಗರ ಉಪಚುನಾವಣೆ ಸಂದರ್ಭದಲ್ಲಿ ಮುನಿರತ್ನ ಪರ ಪ್ರಚಾರ ನಡೆಸುವಾಗ ನಿಯಮ ಉಲ್ಲಂಸಿದ್ದ ನಟ ದರ್ಶನ್‌ಗೆ ನ.6ರಂದು 250 ರೂ. ದಂಡ ವಿಧಿಸಲಾಗಿದೆ. ಜತೆಗೆ ವಿಪತ್ತು ನಿರ್ವಹಣಾ ಕಾಯ್ದಯಡಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಲಾಗಿದೆ ಎಂದು ಸರ್ಕಾರದ ಮೆಮೋದಲ್ಲಿ ಹೇಳಲಾಗಿತ್ತು.
ಎನ್‌ಸಿಆರ್‌ಗೆ ಆಕ್ಷೇಪ: ಅರ್ಜಿದಾರರ ಪರ ವಕೀಲರಲ್ಲೊಬ್ಬರಾದ ಜಿ.ಆರ್. ಮೋಹನ್, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಸಂಜ್ಞೇಯ ಅಪರಾಧ ಕೃತ್ಯವೆಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಬೇಕು. ಆದರೆ, ಈ ಪ್ರಕರಣಗಳಲ್ಲಿ ಕೇವಲ ಎನ್‌ಸಿಆರ್ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ನಿಯಮ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಂಮಿಕ ರೋಗ ತಡೆ ಕಾಯ್ದೆಯಡಿ ಕ್ರಮ ಜರುಗಿಸದೆ ಕೇವಲ ಎನ್‌ಸಿಆರ್ ದಾಖಲಿಸಿರುವುದೇಕೆ ಎಂದು ಪ್ರಶ್ನಿಸಿದ ಪೀಠ, ಕರ್ನಾಟಕ ಸಾಂಕ್ರಾಮಿಕ ತಡೆ ಕಾಯ್ದೆಗೆ ರೂಪಿಸಲಾಗಿರುವ ನಿಯಮಗಳ ಬಗ್ಗೆ ಕೋರ್ಟ್‌ಗೆ ಮಾಹಿತಿ ಇಲ್ಲ. ಆದ್ದರಿಂದ, ಆ ನಿಯಮಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಕೋವಿಡ್ ಮಾರ್ಗಸೂಚಿ ಉಲ್ಲಂಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸುವ ಸಂಬಂಧ ನ್ಯಾಯಾಲಯವೇ ಸೂಕ್ತ ನಿರ್ದೇಶನ ನೀಡಲಿದೆ ಎಂದು ತಿಳಿಸಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.