

ಮಂಗಳೂರು/ಉಡುಪಿ: ಶಾಲಿನಿ ಟೀಚರ್ ಈಗ ಹೆಸರಿಗೆ ಮಾತ್ರ ಟೀಚರ್. ಈಗ ಅವರು ವಿವಿಧ ಕಂಪನಿಗಳ ಸೀರೆ, ರವಿಕೆ ಬಟ್ಟೆ ಸಹಿತ ವಿವಿಧ ಉಡುಪುಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಹುಡುಕಿ ಮಾರಾಟ ಮಾಡುತ್ತಾರೆ.
ಇದು ಕರೊನಾ ಸಂಕಷ್ಟ ಪರಿಣಾಮ ಸುಳ್ಯ ತಾಲೂಕಿನ ಗ್ರಾಮವೊಂದರ ಅನುದಾನ ರಹಿತ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ ಉದ್ಯೋಗ ಕಳೆದುಕೊಂಡ ಮಹಿಳೆಯ ಕತೆ(ಹೆಸರು ಬದಲಿಸಲಾಗಿದೆ).
ಈ ಕೆಲಸ ಖಂಡಿತಾ ಸುಲಭವಲ್ಲ. ಫೇಸ್‌ಬುಕ್, ವಾಟ್ಸಪ್ ಸ್ಟೇಟಸ್ ಮೂಲಕ ನಾನು ಪೂರೈಸುವ ಬಟ್ಟೆಗಳ ಬಗ್ಗೆ ಪ್ರಚಾರ ನಡೆಸುತ್ತೇನೆ. ಪರಿಚಿತರಲ್ಲೂ ಕೆಲವರಷ್ಟೇ ಸ್ಪಂದಿಸುತ್ತಾರೆ ಎನ್ನುತ್ತಾರೆ ಶಾಲಿನಿ ಟೀಚರ್.
ನನ್ನ ಗಂಡ ಅನುದಾನಿತ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿ ದುಡಿಯುತ್ತಿದ್ದು, ಅವರಿಗೆ ವೇತನ ಬರುತ್ತಿದೆ. ಆದ್ದರಿಂದ ನಾವು ಹೇಗೋ ಕಷ್ಟದಲ್ಲಿ ಖರ್ಚು ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ಒಬ್ಬರ ವೇತನವನ್ನೇ ಅವಲಂಬಿಸಿರುವ ಶಿಕ್ಷಕರ ಕುಟುಂಬಗಳು ತೀರ ಕಷ್ಟದಲ್ಲಿ ಸಿಲುಕಿವೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು.
ಕೆಲಸಕ್ಕೆ ಕುತ್ತು: ಗರಿಷ್ಠ ಸಂಖ್ಯೆಯಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿರುವ, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಕರು ಕರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನ್‌ಲೈನ್ ತರಗತಿ ನಡೆಸುವ ಕೆಲವು ಖಾಸಗಿ/ಅನುದಾನಿತ ಶಾಲೆಗಳ ಆಡಳಿತ ಮಂಡಳಿ ಶಿಕ್ಷಕರಿಗೆ ಅರ್ಧ ವೇತನ ನೀಡುತ್ತಿವೆ. ಇನ್ನು ಕೆಲವು ಸಂಸ್ಥೆಗಳು ಮನೆಯಿಂದಲೇ ಆನ್‌ಲೈನ್ ಪಾಠ ಮಾಡುವಂತೆ ಸೂಚಿಸಿದರೂ ವೇತನ ನೀಡುತ್ತಿಲ್ಲ. ಕೆಲ ಸಂಸ್ಥೆಗಳು ಹಲವರನ್ನು ಕೆಲಸದಿಂದಲೇ ಕಿತ್ತು ಹಾಕಿವೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಮರು ನೇಮಕಾತಿ ಸಂದರ್ಭ ನಿಮಗೆ ಆದ್ಯತೆ ಕೊಡೋಣ ಎಂಬುದು ಆಡಳಿತ ಮಂಡಳಿಗಳು ಕೆಲಸ ಕಳೆದುಕೊಂಡವರಿಗೆ ನೀಡಿರುವ ಸಾಂತ್ವನ.
ಆದಾಯ ಮೂಲ ಸೃಷ್ಟಿ: ಪುತ್ತೂರು ಅಂಬಿಕಾ ವಿದ್ಯಾಲಯ ಶಿವಂ ಫುಡ್ ಪ್ರೊಡಕ್ಟ್ಸ್ ಹೆಸರಿನಲ್ಲಿ ಸಣ್ಣ ಪ್ರಮಾಣದ ಆಹಾರ ಉದ್ಯಮ ಆರಂಭಿಸಿದೆ. ಇಲ್ಲಿ ಪಾಠ ಶಾಲೆಯೇ ಪಾಕ ಶಾಲೆಯಾಗಿ ಪರಿವರ್ತನೆಯಾಗಿದೆ. ಇದರಿಂದ ಶಾಲೆಯಲ್ಲೇ ನೌಕರರಿಗೆ ಪರ್ಯಾಯ ಆದಾಯ ಮೂಲ ಸೃಷ್ಟಿಯಾಗಿದೆ. ಉದ್ಯಮಕ್ಕೆ ಮೂಲ ಬಂಡವಾಳ 50 ಸಾವಿರ ರೂ.ವನ್ನು ಶಾಲೆಯ ಆಡಳಿತ ಮಂಡಳಿ ಒದಗಿಸಿದೆ. ಜತೆಗೆ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಮಾಸಿಕ ಅರ್ಧ ವೇತನ ಒದಗಿಸಲಾಗುತ್ತಿದೆ. ಶಿಕ್ಷಕರು ಈಗ ಹಿಂದಿಗಿಂತಲೂ ಹೆಚ್ಚಿನ ಆದಾಯ ಪಡೆಯುತ್ತಿರುವ ಸಮಾಧಾನದಲ್ಲಿ ಇದ್ದಾರೆ.
ಏನು ಮಾಡ್ತಿದ್ದಾರೆ?: ಉದ್ಯೋಗ ಕಳೆದುಕೊಂಡಿರುವ ಮತ್ತು ವೇತನಕ್ಕೆ ಕತ್ತರಿ ಬಿದ್ದಿರುವ ಶಿಕ್ಷಕರು ಪರ್ಯಾಯವಾಗಿ ಏನು ಮಾಡಬಹುದು ಎಂದು ಪ್ರಯೋಗಕ್ಕಿಳಿದಿದ್ದಾರೆ. ಶಿಕ್ಷಕಿಯರು ಮನೆಯಲ್ಲೇ ಸಾಂಬಾರು ಪುಡಿ, ಉಪ್ಪಿನಕಾಯಿ, ಸಿಹಿತಿನಿಸು ತಯಾರಿಸಿ ಮಾರಾಟ ನಡೆಸುತ್ತಿದ್ದಾರೆ. ಶಿಕ್ಷಕರು ಮಾರ್ಕೆಟಿಂಗ್, ತರಕಾರಿ ಮಾರಾಟ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರೆಕಾಲಿಕವಾಗಿ ಸಿಗುವ ಕೆಲಸಗಳತ್ತ ಹೆಚ್ಚು ಗಮನ ಹರಿಸಿರುವುದು ಕಂಡುಬಂದಿದೆ. ಎಲ್ಲರ ಚಿತ್ತ ಶಾಲೆ ಆದಷ್ಟು ಬೇಗ ಶುರುವಾಗಲಿ ಎಂಬತ್ತ ಇರುವುದು ಸ್ಪಷ್ಟ.
ಕಾಲೇಜು ಉಪನ್ಯಾಸಕರದ್ದೂ ಇದೇ ಕಥೆ: ಪ್ರತಿಷ್ಠಿತ ಖಾಸಗಿ ಕಾಲೇಜುಗಳ ಉಪನ್ಯಾಸಕರ ಪರಿಸ್ಥಿತಿಯೂ ಭಿನ್ನವಲ್ಲ. ಲಕ್ಷಾಂತರ ಶುಲ್ಕ ಪಾವತಿಸಿಕೊಂಡು ಸೀಟು ಭರ್ತಿ ಮಾಡಿಕೊಳ್ಳುವ ಸಂಸ್ಥೆಗಳೂ ಉಪನ್ಯಾಸ ವರ್ಗ, ಬೋಧಕೇತರ ಸಿಬ್ಬಂದಿಯ ವೇತನಕ್ಕೆ ಪೂರ್ತಿ ಅಥವಾ ಅರ್ಧ ಕತ್ತರಿ ಪ್ರಯೋಗಿಸಿವೆ. ಈ ಬಗ್ಗೆ ಪ್ರಶ್ನಿಸಿದರೆ ಇರುವ ಉದ್ಯೋಗವನ್ನು ಕಳೆದುಕೊಳ್ಳುವ ಭಯವಿದೆ.
ಆಟೋ ಚಾಲಕರು, ಕ್ಷೌರಿಕರು ಮುಂತಾದ ವರ್ಗದ ಕಾರ್ಮಿಕರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿದೆ. ಆದರೆ ದೊಡ್ಡ ಪ್ರಮಾಣದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ಕಷ್ಟವನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಶಿಕ್ಷಕಿ ವೃತ್ತಿಯಲ್ಲಿ ವೇತನ ಕಡಿಮೆ ಇದ್ದರೂ ಅದರಿಂದ ಮನೆ ನಿಭಾಯಿಸಲು ಅನುಕೂಲವಾಗಿತ್ತು. ಸಮಾಜದಲ್ಲಿ ಗೌರವ ಇತ್ತು. ಈ ವೃತ್ತಿ ಬಿಟ್ಟು ಬೇರೆ ವ್ಯಾಪಾರದಂತಹ ಆದಾಯ ಮೂಲಗಳನ್ನು ಕಂಡುಕೊಳ್ಳಲು ಮನಸ್ಸು ಸಿದ್ಧವಾಗುತಿಲ್ಲ. ಫ್ಯಾನ್ಸಿ, ದಿನಸಿ ಅಂಗಡಿಗಳಲ್ಲಿ ನಿಲ್ಲಲು, ಮನೆಮನೆಗೆ ತೆರಳಿ ಫಿನಾಯಿಲ್ ಮಾರಾಟ ಮಾಡಲು ಕಷ್ಟವಾಗುತ್ತಿದೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೆ ಟ್ಯೂಶನ್ ಸೆಂಟರ್ ತೆರೆಯಬೇಕು ಎಂದು ಯೋಚನೆ ಮಾಡುತ್ತಿದ್ದೇನೆ. - ಓರ್ವ ಶಿಕ್ಷಕಿ, ಪುತ್ತೂರು