ರಂಜಾನ್‌ಗೆ ಈ ಬಾರಿಯೂ ಆತಂಕ

ramzan
Published on

ಅನ್ಸಾರ್ ಇನೋಳಿ, ಉಳ್ಳಾಲ

ರಂಜಾನ್ ತಿಂಗಳು ಸನಿಹದಲ್ಲಿದೆ. ಕಳೆದ ವರ್ಷ ಈ ಹಬ್ಬದ ಸಂಭ್ರಮಕ್ಕೆ ಕಂಟಕವಾಗಿದ್ದ ಕರೊನಾ, ಈ ಬಾರಿ ಮತ್ತದೇ ಆತಂಕ ಉಂಟು ಮಾಡಿದೆ.

ಇಂಗ್ಲಿಷ್ ಪದ್ಧತಿಯ ಕ್ಯಾಲೆಂಡರ್ ಜನವರಿಯಿಂದ ಆರಂಭಗೊಂಡು ಡಿಸೆಂಬರ್‌ಗೆ ಅಂತ್ಯವಾಗುತ್ತದೆ. ಇಲ್ಲಿ ತಿಂಗಳಿಗೆ 30, 31 ದಿನಗಳ ಲೆಕ್ಕಾಚಾರ. ಆದರೆ ಇಸ್ಲಾಮಿಕ್ ಕ್ಯಾಲೆಂಡರ್ ಮೊಹರಂನಿಂದ ಆರಂಭವಾಗಿ ದುಲ್ಹಜ್‌ಗೆ ಅಂತ್ಯವಾಗುತ್ತದೆ. ಇಲ್ಲಿ ಚಂದ್ರ ದರ್ಶನದ ಆಧಾರದಲ್ಲಿ ತಿಂಗಳಿಗೆ 29, 30 ದಿನಗಳನ್ನು ಲೆಕ್ಕ ಹಾಕಲಾಗುತ್ತದೆ. ಅದರಂತೆ ಈ ಬಾರಿಯ ರಂಜಾನ್ ಏ.13 ಅಥವಾ 14ರಂದು ಆರಂಭಗೊಳ್ಳಲಿದೆ.

ಕಳೆದ ವರ್ಷ ಕರೊನಾ ಹಾವಳಿಯಿಂದ ಮಸೀದಿಗಳು ಬಂದ್ ಆಗಿದ್ದವು. ಈದುಲ್ ಫಿತರ್ ಹಬ್ಬಕ್ಕೂ ಮಸೀದಿಗೆ ಪ್ರವೇಶ ಇರಲಿಲ್ಲ. ಆದರೆ ಹಬ್ಬದ ಒಂದು ವಾರ ಮೊದಲು ಬಟ್ಟೆ, ಫ್ಯಾನ್ಸಿ, ಚಪ್ಪಲಿ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೂ ಮುಸ್ಲಿಂ ವರ್ತಕರು ವ್ಯಾಪಾರಕ್ಕೆ ಹಿಂದೇಟು ಹಾಕಿದ್ದರು. ಧರ್ಮಗುರುಗಳು, ಮುಸ್ಲಿಂ ಮುಖಂಡರು ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಯಾರೂ ಮನೆಯಿಂದ ಹೊರಹೋಗಬಾರದು ಎಂದು ಫರ್ಮಾನು ಹೊರಡಿಸಿದ್ದರು. ಕರೊನಾ ಪರಿಣಾಮ ಆ ಒಂದು ತಿಂಗಳಲ್ಲೇ ವ್ಯಾಪಾರಿಗಳು ಲಕ್ಷಗಟ್ಟಲೆ ಆದಾಯ ಕಳೆದುಕೊಳ್ಳುವಂತಾಗಿತ್ತು.

ಈ ಬಾರಿ ಬಿಸಿಲಿನ ಬರೆ: ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಈ ವರ್ಷದ ರಂಜಾನ್ ಅತ್ಯಂತ ಕಠಿಣವಾಗಿರಲಿದೆ. ಈ ತಿಂಗಳಲ್ಲಿ ಹೆಚ್ಚಾಗಿ ಕರಿದ ತಿಂಡಿಗಳು, ತಂಪಾದ ಪಾನೀಯ ಬಳಸಲಾಗುತ್ತದೆ. ಸಮೋಸ, ಕಟ್ಲೆಟ್, ಬೋಂಡಾ ಮೊದಲಾದ ಕರಿದ ತಿಂಡಿಗಳು, ಕಲ್ಲಂಗಡಿ, ಚಿಪ್ಪಡ್ ಇತ್ಯಾದಿ ತಣ್ಣಗಿನ ಪಾನೀಯಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ತಿಂಗಳಿಡೀ ಇವುಗಳ ಸೇವನೆ ಶೀತ, ಜ್ವರಕ್ಕೆ ಆಹ್ವಾನ ನೀಡುತ್ತದೆ. ಪ್ರಸ್ತುತ ಕರೊನಾ ಹೆಚ್ಚುತ್ತಿರುವುದರಿಂದ ಶೀತ, ಜ್ವರದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ತಂಪು ಪಾನೀಯ, ಕರಿದ ಆಹಾರ ಸೇವನೆಯಿಂದ ದೂರ ಇರಬೇಕು ಎನ್ನುತ್ತಾರೆ ವೈದ್ಯರು.

ಈ ವರ್ಷ ಹಿಂದಿಗಿಂತಲೂ ಅಧಿಕ ತಾಪಮಾನ ಇದೆ. ರಂಜಾನ್‌ನಲ್ಲಿ ಇಫ್ತಾರ್ ಸಂದರ್ಭ ಹದಾ ಬಿಸಿ ನೀರಿನ ಜತೆ ಖರ್ಜೂರ ಸೇವಿಸಿ, ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಬೇಕು. ಕರಿದ ತಿಂಡಿಯಿಂದ ದೂರವಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟಬಹುದು. ಆದಷ್ಟು ಬಿಸಿಲಿನಿಂದ ದೂರವಿರಿ. ಅಲರ್ಜಿ, ಅಸ್ತಮಾ ಇರುವವರು ತಂಪಾದ ಪಾನೀಯ, ಶೀತಕ್ಕೆ ಕಾರಣವಾಗುವ ತಿಂಡಿ, ಪಾನೀಯಗಳನ್ನು ವರ್ಜಿಸಿ ಆರೋಗ್ಯ ಕಾಪಾಡಲು ಪ್ರಯತ್ನಿಸಬೇಕು.

ಡಾ.ಅನೂಪ್ ಕುಮಾರ್ ಸಹಾಯಕ ಪ್ರಾಧ್ಯಾಪಕ, ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

ಮುಸ್ಲಿಮರಿಗೆ ರಂಜಾನ್ ಅತ್ಯಂತ ಪವಿತ್ರ ತಿಂಗಳು. ಕಳೆದ ವರ್ಷ ಕರೊನಾದಿಂದ ಮನೆಯಲ್ಲಿದ್ದೇ ಆರೋಗ್ಯ ರಕ್ಷಣೆ ಮಾಡಿಕೊಳ್ಳಲಾಗಿತ್ತು. ಈ ವರ್ಷವೂ ಕರೊನಾ ಭೀತಿ ಇರುವುದರಿಂದ ಖರೀದಿಯ ಹೆಸರಲ್ಲಿ ಮೈಮರೆಯದೆ ತಮ್ಮ ಹಾಗೂ ಇತರರ ಆರೋಗ್ಯದ ಕಾಳಜಿ ವಹಿಸಬೇಕಿದೆ.

ಮುಸ್ತಫಾ ಅಬ್ದುಲ್ಲಾ ಅಧ್ಯಕ್ಷ, ಮುಹಿಯುದ್ದೀನ್ ಜುಮಾ ಮಸೀದಿ, ಮೇಲಂಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net