

ಸುಳ್ಯ: ಕೋವಿಡ್ ಸೆಂಟರ್‌ಗೆ ತೆರಳಲು ನಿರಾಕರಿಸಿದ್ದ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ಕೋವಿಡ್ ಸೋಂಕಿತ ಯುವಕನೋರ್ವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಂಚಾಯಿತಿ ಸಿಬ್ಬಂದಿ ಮನವಿ ಮಾಡಿದರೂ ಸೋಂಕಿತ ಯುವಕ ಹೋಂ ಐಸೋಲೇಶನ್‌ನಲ್ಲಿ ಇರುವುದಾಗಿ ಹಠ ಹಿಡಿದಿದ್ದ. ಬಳಿಕ ಆತನ ತಾಯಿಗೂ ಸೋಂಕು ತಗುಲಿದೆ. ಯುವಕ ಊರಿನಲ್ಲಿ ತಿರುಗಾಡುತ್ತಿರುವ ಬಗ್ಗೆ ಊರವರಿಂದ ಪಂಚಾಯಿತಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೋಲೀಸರು ಪಂಚಾಯಿತಿ ಸಿಬ್ಬಂದಿಯೊಂದಿಗೆ ತೆರಳಿ ಆತನ ಮನವೊಲಿಸಿ ಪಂಜದ ಕೋವಿಡ್ ಸೆಂಟರ್‌ಗೆ ಕರೆದೊಯ್ದರು.
ಕೇರ್ ಸೆಂಟರ್‌ಗೆ ದಾಖಲಾಗುವ ವೇಳೆ ಯುವಕ ಪಂಚಾಯಿತಿ ಪಿಡಿಒರನ್ನು ಕ್ವಾರಂಟೈನ್ ಮುಗಿಸಿ ಬಂದ ಬಳಿಕ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ. ಸೋಂಕಿತನ ವಿರುದ್ಧ ಸುಬ್ರಹ್ಮಣ್ಯ ಪಿಡಿಒ ಪೊಲೀಸರಿಗೆ ದೂರು ನೀಡಿದ್ದಾರೆ.