ನೆಗೆಟಿವ್ ವರದಿ ಇದ್ದರಷ್ಟೇ ದ.ಕ. ಪ್ರವೇಶ, ಕೇರಳದಿಂದ ಬರುವವರ ತಪಾಸಣೆಗೆ ತಲಪಾಡಿ ಸಹಿತ 13 ಕಡೆ ಚೆಕ್‌ಪೋಸ್ಟ್

Covid
Published on

ಮಂಗಳೂರು: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವವರ ಕೈಯಲ್ಲಿ 72 ಗಂಟೆ ಮೀರದ ಆರ್‌ಟಿ-ಪಿಸಿಆರ್ ವರದಿ ಇರುವುದು ಕಡ್ಡಾಯ. ಸೋಮವಾರದಿಂದಲೇ ಜಿಲ್ಲೆಯ ಗಡಿಭಾಗಗಳಲ್ಲಿ ರ‌್ಯಾಂಡಮ್ ತಪಾಸಣೆ ಆರಂಭಿಸಲಾಗುವುದು. ವರದಿ ಇಲ್ಲದವರನ್ನು ವಾಪಸ್ ಕಳುಹಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಅರ್ಧಪಾಲು ಕೇರಳದ್ದಾಗಿರುವುದರಿಂದ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುವುದು. ತಲಪಾಡಿ ಸೇರಿದಂತೆ ಜಿಲ್ಲೆಯ 13 ಗಡಿಭಾಗದಲ್ಲಿ ಆರೋಗ್ಯ ಇಲಾಖೆ, ಪೊಲೀಸರು ಹಾಗೂ ಸ್ಥಳೀಯಾಡಳಿತ ಸಂಸ್ಥೆ ನೆರವಿನಿಂದ ಚೆಕ್‌ಪೋಸ್ಟ್ ನಿರ್ಮಿಸಲಾಗುವುದು. ತಲಪಾಡಿಯಲ್ಲಿ ತಲಾ 200 ಮಂದಿಗೆ ಆರ್‌ಎಟಿ ಮತ್ತು ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಯಾರಲ್ಲೆಲ್ಲ ನೆಗೆಟಿವ್ ಕಡ್ಡಾಯ?: ಕೇರಳದಿಂದ ಬಂದು ದ.ಕ ಜಿಲ್ಲೆಯ ಮೂಲಕ ಇತರೆಡೆ ಹೋಗುವವರು. ಉದಾ: ಪ್ರವಾಸಿಗರು, ಮದುವೆ ಮೊದಲಾದ ಕಾರ್ಯಕ್ರಮಕ್ಕೆ ಬರುವವರು, ಜಿಲ್ಲೆಯ ರೆಸಾರ್ಟ್, ಹೋಟೆಲ್, ಲಾಡ್ಜ್‌ಗಳಲ್ಲಿ ಬಂದು ತಂಗುವವರು, ಧಾರ್ಮಿಕ ಕ್ಷೇತ್ರಗಳಿಗೆ ಬಂದು ಹೋಗುವವರು ತಮ್ಮ ಜತೆ 72 ಗಂಟೆ ಮೀರದ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದರು.

ಉದ್ಯೋಗಿಗಳಿಗೆ ಏನು?: ಕೇರಳ ಭಾಗದಿಂದ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಜಿಲ್ಲೆಗೆ ಬರುವವರು ಪ್ರತಿನಿತ್ಯ ಬಂದು ಹೋಗುವವರು 15 ದಿನಕ್ಕೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಚಕ್ಷಣಾ ದಳದವರು ದಿಢೀರ್ ಭೇಟಿ ನೀಡಿದಾಗ ಇದು ಪಾಲನೆಯಾಗದಿದ್ದಲ್ಲಿ, ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಕೇರಳ ಸಿಬ್ಬಂದಿ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ನೀಡಬೇಕು. ತಪ್ಪಿದರೆ ಪರವಾನಗಿ ರದ್ದು ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.

5 ಪ್ರಕರಣಗಳಿದ್ದರೆ ಕಂಟೇನ್ಮೆಂಟ್ ಜೋನ್: ಇನ್ನು ಮುಂದೆ 5 ಮತ್ತು ಹೆಚ್ಚು ಪಾಸಿಟಿವ್ ವರದಿಯಾದರೆ ಅಂತಹ ಹಾಸ್ಟೆಲ್, ಹೋಟೆಲ್, ಹೋಮ್‌ಸ್ಟೇ, ರೆಸಾರ್ಟ್, ಮಾಲ್, ವಿದ್ಯಾಸಂಸ್ಥೆಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗುತ್ತದೆ. ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ಕೇರಳದಿಂದ ಬರುವಾಗ 72 ಗಂಟೆ ಮೀರದ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದು ಡಿಸಿ ತಿಳಿಸಿದರು.

ಬಾಕಿ ಉಳಿದವರೂ ಲಸಿಕೆ ಪಡೆಯಿರಿ: ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಕೋವಿಡ್ ನಿವಾರಣಾ ಲಸಿಕಾ ಅಭಿಯಾನ ಇನ್ನೆರಡು ದಿನ ಮಾತ್ರ ನಡೆಯಲಿದೆ. ಬಾಕಿ ಉಳಿದವರೂ ಲಸಿಕೆ ಪಡೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೋಂದಣಿ ಮಾಡಿಕೊಂಡಿದ್ದ 52,523 ಆರೋಗ್ಯ ಕಾರ್ಯಕರ್ತರಲ್ಲಿ 28,150 ಮಂದಿ ಹಾಗೂ 8007 ಫ್ರಂಟ್‌ಲೈನ್ ವರ್ಕರ್ಸ್‌ಗಳಲ್ಲಿ 2966 ಮಂದಿ ಮೊದಲ ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೆ. ನೋಂದಾಯಿಸಿರುವ ಎಲ್ಲರೂ ತಾಲೂಕು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಲಸಿಕೆ ಪಡೆಯಬಹುದು. ಎಸ್‌ಎಂಎಸ್ ಬಾರದಿದ್ದರೂ ಲಸಿಕೆ ಪಡೆಯಬಹುದಾಗಿದೆ.

ಬಿಪಿ-ಶುಗರ್ ಇದ್ದರೂ ಸಮಸ್ಯೆಯಿಲ್ಲ. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆದು ಆಲ್ಕೋಹಾಲ್ ಸೇವನೆ ಮಾಡುವುದರಿಂದ ಸಮಸ್ಯೆಯಾಗುತ್ತದೆ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿದೆ. ಈ ಕುರಿತು ಈಗಾಗಲೇ ಸ್ಪಷ್ಟೀಕರಣ ನೀಡಲಾಗಿದೆ. ಲಸಿಕೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವೇಳೆಯೂ ಕೆಲವೊಂದು ಪ್ರಶ್ನೆಗಳು ಏಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

30 ಮಂದಿಗೆ ಕೋವಿಡ್ ದೃಢ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 25 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 38 ಮಂದಿ ಸೋಂಕುಮುಕ್ತರಾಗಿ ಬಿಡುಗಡೆಯಾಗಿದ್ದಾರೆ. 249 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆಯಲ್ಲಿ ಐವರಿಗೆ ಪಾಸಿಟಿವ್ ಬಂದಿದೆ. 15 ಮಂದಿ ಗುಣಮುಖರಾಗಿದ್ದಾರೆ. ಸದ್ಯ 58 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net