ಉಡುಪಿಗೆ 50 ಹೆಚ್ಚುವರಿ ಐಸಿಯು ಬೆಡ್, ಸಚಿವ ಸುನೀಲ್ ಮಾಹಿತಿ

sunil kumar new
Published on

ಉಡುಪಿ: ಜಿಲ್ಲೆಯಲ್ಲಿ 10 ದಿನದಿಂದ ಕೋವಿಡ್ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಿದ್ದು, ಆ.30ರೊಳಗೆ ಕಾರ್ಕಳದಲ್ಲಿ 15, ಕುಂದಾಪುರದಲ್ಲಿ 15, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 20 ಹೆಚ್ಚುವರಿ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲು ತೀರ್ಮಾನಿಸಲಾಗಿದೆ; ಇದಕ್ಕಾಗಿ 2 ಸಾವಿರ ಬೆಡ್ ವ್ಯವಸ್ಥೆ ಮಾಡಲಾಗುತ್ತದೆ. ಮಣಿಪಾಲ ಎಂಐಟಿ ಹಾಸ್ಟೆಲ್, ಕಾರ್ಕಳ, ನಿಟ್ಟೆ, ಕುಂದಾಪುರದಲ್ಲಿ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಹೆಬ್ರಿ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡುತ್ತಿದ್ದು, ಕಾರ್ಕಳ, ಉಡುಪಿ, ಕುಂದಾಪುರದಲ್ಲಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

5 ಕೇಸ್ ಬಂದರೆ ಕಂಟೇನ್ಮೆಂಟ್: 100 ಮೀಟರ್ ಒಳಗೆ 5 ಕೇಸ್ ದಾಖಲಾದ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಲಾಗುವುದು. ಕೋವಿಡ್ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ, ಮನೆಯನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ತಿಳಿಸಿದರು.

34 ಸಾವಿರ ಡೋಸ್ ಲಸಿಕೆ ಕೊರತೆ: ಜಿಲ್ಲೆಗೆ ಲಸಿಕೆ ಪೂರೈಕೆ ನಿಧಾನವಾಗುತ್ತಿದ್ದು, 2ನೇ ಹಂತದ ವಿತರಣೆಗೆ 34 ಸಾವಿರ ಡೋಸ್ ಕೊರತೆಯಾಗಿದೆ. ಈ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಪಾಸಿಟಿವ್ ರೇಟ್ ಏರಿಕೆ ಹಿನ್ನೆಲೆಯಲ್ಲಿ ಮೊದಲ ಡೋಸ್‌ಗೆ ಕೂಡ ಬೇಡಿಕೆ ಹೆಚ್ಚಳವಾಗಿದೆ ಎಂದರು.

ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಜಿಪಂ ಸಿಇಒ ಡಾ. ನವೀನ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

11 ಕೋಟಿ ರೂ. ವಿಪತ್ತುನಿಧಿ

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ನಡೆಸಲು ಗ್ರಾಪಂ ಮಟ್ಟದಲ್ಲಿ ವಿಪತ್ತು ಕಾರ್ಯಪಡೆ ಸನ್ನದ್ಧಗೊಳಿಸಲಾಗಿದೆ. ಮಳೆ ಹಾನಿಯಿಂದ ಸಂತ್ರಸ್ತರಾದವರಿಗೆ 48 ಗಂಟೆಯೊಳಗೆ ಪರಿಹಾರ ಚೆಕ್ ವಿತರಿಸಲು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಸದ್ಯ 11 ಕೋಟಿ ರೂ. ವಿಪತ್ತು ನಿರ್ವಹಣಾ ನಿಧಿ ಜಿಲ್ಲಾಡಳಿತದ ಖಾತೆಯಲ್ಲಿದೆ. ತೌಕ್ತೆ ಚಂಡಮಾರುತ ಸಂದರ್ಭದಲ್ಲಿ 100 ಕೋಟಿ ರೂ. ಹಾನಿ ಸಂಭವಿಸಿದ ಬಗ್ಗೆ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸಚಿವ ಸುನೀಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net