ಜನತಾ ಕರ್ಫ್ಯೂ ಉಲ್ಲಂಘಿಸಿದರೆ ಕ್ರಮ

Published on

ಮಂಗಳೂರು/ಉಡುಪಿ: ಕೋವಿಡ್ ನಿಯಂತ್ರಣದ ಭಾಗವಾಗಿ ರಾಜ್ಯಾದ್ಯಂತ ಮಂಗಳವಾರ ರಾತ್ರಿ 9ರಿಂದ ಮೇ 12ರಂದು ಬೆಳಗ್ಗೆ 6 ತನಕ ಎರಡು ವಾರಗಳ ಕಾಲ ಘೋಷಿಸಲಾಗಿರುವ ಜನತಾ ಕರ್ಫ್ಯೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6ರಿಂದ 10ರವರೆಗೆ ಅವಕಾಶವಿದ್ದು, ಸಾರ್ವಜನಿಕರು ತಮ್ಮ ಮನೆಯ ಸಮೀಪದ ಅಂಗಡಿಗಳಲ್ಲೇ ವಸ್ತುಗಳನ್ನು ಖರೀದಿಸಬೇಕು. ಅನವಶ್ಯಕವಾಗಿ ಸಂಚರಿಸಬಾರದು.

ಕಾದಿರಿಸಿದ ವಿಮಾನ ಪ್ರಯಾಣ ಹಾಗೂ ರೈಲು ಪ್ರಯಾಣ ಹೊರತುಪಡಿಸಿ ಎಲ್ಲ ರೀತಿಯ ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ. ಆಟೋ, ಕ್ಯಾಬ್, ಟ್ಯಾಕ್ಸಿಗಳ ಮೂಲಕ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ವಿಮಾನ ಯಾನ ಟಿಕೆಟ್ ಹಾಗೂ ರೈಲು ಪ್ರಯಾಣದ ಟಿಕೆಟ್‌ಗಳನ್ನೇ ಪಾಸ್‌ಗಳಂತೆ ಬಳಸಿಕೊಳ್ಳಬಹುದು. ತುರ್ತು ಆರೋಗ್ಯ ಸಮಸ್ಯೆಯಿರುವ ರೋಗಿಗಳು ಆಟೋ, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಸಂಚರಿಸಬಹುದು. ಸರಕು ಸಾಗಾಟ ವಾಹನಗಳು ಲೋಡ್ ಮತ್ತು ಅನ್‌ಲೋಡ್ ಮಾಡಿ ಸಂಚರಿಸಲು ಯಾವುದೇ ನಿರ್ಬಂಧಗಳಿಲ್ಲ.

ಅವಶ್ಯಕ ಮತ್ತು ತುರ್ತುಸೇವೆ ಒದಗಿಸುವ ಸಿಬ್ಬಂದಿ ಗುರುತಿನ ಚೀಟಿ ಆಧಾರದಲ್ಲಿ ಸಂಚರಿಸಬಹುದು. ಗಾರ್ಮೆಂಟ್ಸ್ ಹೊರತುಪಡಿಸಿ ಎಲ್ಲ ಕೈಗಾರಿಕೆಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಗುರುತಿನ ಚೀಟಿ, ದೃಢೀಕರಣ ಪತ್ರ ತೋರಿಸಿದರೆ ಸಾಕು.

ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶವಿದ್ದು, ಕಾರ್ಮಿಕರಿಗೆ ಸಂಬಂಧಪಟ್ಟ ನಿರ್ಮಾಣ ಸಂಸ್ಥೆ ಅಥವಾ ಮಾಲೀಕರು ಸೂಕ್ತ ಗುರುತಿನ ಚೀಟಿ ಒದಗಿಸಬೇಕು. ಮೀನುಗಾರಿಕೆಯನ್ನು ನಿಗದಿತ ಅವಧಿಯೊಳಗೆ ಮಾಡಲು ಕ್ರಮ ಕೈಗೊಳ್ಳಬೇಕು. ಕೃಷಿ ಚಟುವಟಿಕೆ ನಡೆಸಲು ನಿರ್ಬಂಧಗಳಿಲ್ಲ.

ಆನ್‌ಲೈನ್ ತರಗತಿ ಮಾತ್ರ: ಶಾಲಾ ಕಾಲೇಜು ತೆರೆಯುವುದಿಲ್ಲ. ಆನ್‌ಲೈನ್, ದೂರ ಶಿಕ್ಷಣ ಪ್ರೋತ್ಸಾಹಿಸಲಾಗುತ್ತಿದೆ. ಆರೋಗ್ಯ, ಪೊಲೀಸ್, ಸರ್ಕಾರಿ ಅಧಿಕಾರಿಗಳು, ನಡುವೆ ಸಿಕ್ಕಿಹಾಕಿಕೊಂಡವರು ಹಾಗೂ ಪ್ರವಾಸಿಗರಿಗೆ ಸೇವೆ ಒದಗಿಸುವ ಹೊಟೇಲ್, ಅತಿಥಿಗೃಹ ಹೊರತುಪಡಿಸಿ ಇತರ ಎಲ್ಲ ಹೊಟೇಲ್, ಅತಿಥಿಗೃಹಗಳ ಸೇವೆ ನಿರ್ಬಂಧಿಸಲಾಗಿದೆ. ಅಗತ್ಯ ಸಂದರ್ಭ ಸಾಮುದಾಯಿಕ ಅಡುಗೆ ಕೋಣೆಗಳ ವ್ಯವಸ್ಥೆ ಒದಗಿಸಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶವಿದೆ.

ದೇವಸ್ಥಾನ ವಿರುದ್ದ ಪ್ರಕರಣ: ದೇವಸ್ಥಾನ, ಚರ್ಚ್ ಮಸೀದಿ ಸಹಿತ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಸೋಮೇಶ್ವರ ಉಳ್ಳಾಲದ ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದರು.

ಮದುವೆ ನೋಡಲ್ ಅಧಿಕಾರಿ: ಕೋವಿಡ್ ಮಾರ್ಗಸೂಚಿ ಪಾಲಿಸಿ 50 ಜನರ ಪರಿಮಿತಿಯಲ್ಲಿ ಮದುವೆ ನಡೆಸಲು ಅವಕಾಶವಿದೆ. ಮಾರ್ಗಸೂಚಿ ಪಾಲನೆ ಪರಿಶೀಲನೆ ಜವಾಬ್ದಾರಿ ಸ್ಥಳೀಯಾಡಳಿತ ಸಂಸ್ಥೆಗಳದ್ದಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಶವ ಸಂಸ್ಕಾರಕ್ಕೆ ಐದು ಜನರ ಮಿತಿ ಇದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ 50 ಮಂದಿ, ಶವ ಸಂಸ್ಕಾರಕ್ಕೆ 5 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಉಡುಪಿ ಡಿಸಿ ಮಾಹಿತಿ ನೀಡಿದ್ದಾರೆ.

ದ.ಕ. 4033 ಬೆಡ್ ಖಾಲಿ: ಕರೊನಾ ಸೋಂಕಿತರ ಪೈಕಿ ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 783 ಮಂದಿ ವಿವಿಧ ಆಸ್ಪತ್ರೆಗಳು ಹಾಗೂ 3249 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಇನ್ನೂ 4033 ಬೆಡ್‌ಗಳು ಖಾಲಿ ಇವೆ. ಅಗತ್ಯ ಸಂದರ್ಭಗಳಲ್ಲಿ ರೋಗಿಗಳಿಗೆ ಬೆಡ್ ಒದಗಿಸಲು ಸಮಸ್ಯೆ ಇಲ್ಲ. ಎರಡು ದಿನಗಳಿಗೆ ಆಗುವಷ್ಟು ಮಾತ್ರ ವ್ಯಾಕ್ಸಿನ್ ಇದ್ದು, ರಾಜ್ಯ ಹಾಗೂ ಕೇಂದ್ರದಿಂದ ಹೆಚ್ಚುವರಿ ವ್ಯಾಕ್ಸಿನ್‌ಗಳನ್ನು ತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ನಗರದಲ್ಲೇ ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಾಣ ಪ್ರಯತ್ನ ನಡೆಯುತ್ತಿದ್ದು, ಒಂದುವರೆ ತಿಂಗಳಲ್ಲಿ ಸಿದ್ಧಗೊಳ್ಳಲಿದೆ ಎಂದು ಡಾ.ರಾಜೇಂದ್ರ ವಿವರಿಸಿದರು.

ಕೋವಿಡ್ ಕೇರ್ ಸೆಂಟರ್: ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತ ಶಿಫಾರಸು ಮಾಡುವ ಕೋವಿಡ್ ಸೋಂಕಿತರಿಗೆ ಶೇ.75 ಬೆಡ್‌ಗಳು ಮೀಸಲಿಟ್ಟಿರುವ ಕುರಿತು ಪರಿಶೀಲಿಸಿ ವರದಿ ನೀಡಬೇಕು. ಹೋಂ ಐಸೋಲೇಷನ್ ಇರಲು ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವವರಿಗೆ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳು ಲಭ್ಯವಿರುವ ರೀತಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಉಡುಪಿ ಡಿಸಿ ಜಗದೀಶ್ ಸೂಚಿಸಿದ್ದಾರೆ.

ಚೆಕ್‌ಪೋಸ್ಟ್ ನಿರ್ಮಾಣ: ಉಡುಪಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ತೆರೆದು ಅಗತ್ಯ ಸಿಬ್ಬಂದಿ ನಿಯೋಜಿಸಿ ಅನಗತ್ಯ ವಾಹನ ಸಂಚಾರ ನಿಯಂತ್ರಿಸಬೇಕು. ವೈದ್ಯಕೀಯ ಕಾರಣಕ್ಕೆ ಹಾಗೂ ಸೂಕ್ತ ಪಾಸ್‌ಗಳನ್ನು ಪಡೆದು ಬರುವವರನ್ನು ಥರ್ಮಲ್ ಸ್ಕಾೃನರ್ ಮೂಲಕ ತಪಾಸಣೆ ಮಾಡಿ ಪ್ರವೇಶಿಸಲು ಅವಕಾಶ ನೀಡಬೇಕು. ಸೂಕ್ತ ಅನುಮತಿಯೊಂದಿಗೆ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಹಾಗೂ ರಕ್ತದಾನ ಮಾಡಲು ತೆರಳುವವರಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಂಗಳೂರಲ್ಲಿ ಸಾವಿರ ಸಿಬ್ಬಂದಿ: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಎರಡು ವಾರಗಳ ಲಾಕ್‌ಡೌನ್‌ನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವುದಕ್ಕೆ 1 ಸಾವಿರ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಆಯಕಟ್ಟಿನ ಜಾಗದಲ್ಲಿ 54 ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಪಾಳಿಯಲ್ಲಿ ಪೊಲೀಸರ ತಂಡ ಕೆಲಸ ಮಾಡಲಿದೆ. ಪ್ರತಿ ಸ್ಟೇಷನ್‌ಗೆ ಎರಡರಂತೆ ಮೊಬೈಲ್ ಪಾರ್ಟಿ ಇರುತ್ತದೆ. ಇವರೆಲ್ಲರೂ ನಿಯಮ ಪಾಲನೆ ನೋಡಿಕೊಳ್ಳಲಿದ್ದಾರೆ. ಜನರು ಅನವಶ್ಯಕ ಓಡಾಡದೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉಡುಪಿಯಲ್ಲಿ 54 ಚೆಕ್‌ಪೋಸ್ಟ್: ಉಡುಪಿ ಜಿಲ್ಲೆಯಲ್ಲಿ 32 ತಾತ್ಕಾಲಿಕ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. 180 ಕಾನ್‌ಸ್ಟೇಬಲ್ಸ್, ಹೆಡ್ ಕಾನ್ಸ್‌ಸ್ಟೇಬಲ್ಸ್, 45 ಮಂದಿ ಪಿಎಸ್‌ಐ, ಸರ್ಕಲ್ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ಸಹಿತ 7 ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net