

ಉಡುಪಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಕೋವಿಡ್-19 ಪರೀಕ್ಷೆಗೆ ಅನುಮತಿ ನೀಡಿದೆ.
ಇಲ್ಲಿಯವರೆಗೆ ಶಂಕಿತ ಕೋವಿಡ್-19 ರೋಗಿಗಳ ಮಾದರಿಗಳನ್ನು ಬೆಂಗಳೂರು, ಹಾಸನ, ಶಿವಮೊಗ್ಗ ಮತ್ತು ಮಂಗಳೂರಿಗೆ ಕಳುಹಿಸಲಾಗುತ್ತಿತ್ತು. ಈ ಪ್ರಯೋಗಾಲಯಗಳಿಗೆ ಹೆಚ್ಚನ ಒತ್ತಡದ ಪರಿಣಾಮ ಪರೀಕ್ಷಾ ವರದಿ ಮೂರು ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಮಣಿಪಾಲದಲ್ಲಿ ಕೋವಿಡ್ ಪರೀಕ್ಷಾ ಸೌಲಭ್ಯದಿಂದ ಒಂದೇ ದಿನದಲ್ಲಿ ವರದಿ ಲಭಿಸಲಿದ್ದು, ಹೆಚ್ಚು ಹೆಚ್ಚು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಅನುಕೂಲವಾಗಿದೆ.
ಕೆಎಂಸಿ ಮಣಿಪಾಲ ಈಗಾಗಲೇ ಸುಸಜ್ಜಿತ ಮತ್ತು ಅಲ್ಟ್ರಾ-ಆಧುನಿಕ ವೈರಾಲಜಿ ಪರೀಕ್ಷಾ ಪ್ರಯೋಗಾಲಯ ಹೊಂದಿದ್ದು, ಆಸ್ಪತ್ರೆಗೆ ಗುರುವಾರ ಐಸಿಎಂಆರ್‌ನಿಂದ ಅಧಿಕೃತ ಅನುಮತಿ ಪತ್ರ ಬಂದಿದೆ. ಪೂರ್ಣಪ್ರಮಾಣದ ಪರೀಕ್ಷೆಗಳು ಮುಂದಿನ 2 ಮೂರು ದಿನಗಳಲ್ಲಿ ಪ್ರಾರಂಭವಾಗಲಿದೆ. 24*7 ಪ್ರಯೋಗಾಲಯ ಕಾರ್ಯನಿರ್ವಹಿಸಿದರೆ ದಿನಕ್ಕೆ ಸರಾಸರಿ 200ಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.
ಜಿಲ್ಲೆಗೆ 2 ಪ್ರಯೋಗಾಲಯ: ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 1.5 ಕೋಟಿ ರೂ.ವೆಚ್ಚದಲ್ಲಿ ಕರೊನಾ ವೈರಸ್‌ಗೆ ಗಂಟಲಿನ ಮಾದರಿಗಳನ್ನು ಪರೀಕ್ಷಿಸಲು ಸುಸಜ್ಜಿತ ಪ್ರಯೋಗಾಲಯವನ್ನು ಪ್ರಾರಂಭಿಸಲು ರಾಜ್ಯ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಈ ಪ್ರಯೋಗಾಲಯ ಮೇ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.