ಹೆಮ್ಮಾರಿ ಅಟ್ಟಹಾಸಕ್ಕೆ 14 ಜನ ಬಲಿ

captain dr k rajendra
Published on

ಬಾಗಲಕೋಟೆ: ಕೋವಿಡ್ ಜಿಲ್ಲೆಯಲ್ಲಿ ತನ್ನ ಕರಾಳ ಮುಖ ಪ್ರದರ್ಶನ ಮಾಡುತ್ತಿದೆ. ನಿತ್ಯವು ನೂರಾರು ಜನರ ದೇಹದೊಳಗೆ ಹೊಕ್ಕು ಹೈರಾಣ್ ಆಗಿಸುತ್ತಿದೆ. ಡೆಡ್ಲಿ ಕರೊನಾ ಸೋಂಕಿಗೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಸಾವಿನ ಸರಣಿ ಜಿಲ್ಲೆಯಲ್ಲಿ ಮುಂದುವರೆಯುತ್ತಿದೆ.

ಜಿಲ್ಲೆಯಲ್ಲಿ ಮೊದಲೆ ಅಲೆ ಇದ್ದಾಗ ಸಾವಿನ ಸಂಖ್ಯೆ ತೀರಾ ಕಡಿಮೆ ಇತ್ತು. ಎರಡನೇ ಅಲೆ ಅಪ್ಪಳಿಸಿದ ಬಳಿಕ ಕಳೆದ ಒಂದು ತಿಂಗಳಿನಲ್ಲಿ ಸೋಂಕಿಗೆ ಬಲಿಯಾಗುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ನಾನಾ ರೂಪದಲ್ಲಿ ಕಾಡುತ್ತಿರುವ ಕೋವಿಡ್‌ಗೆ ಸಾರ್ವಜನಿಕರು ಬಳಲುತ್ತಿದ್ದಾರೆ. ಶುಕ್ರವಾರ ಡೆಡ್ಲಿ ಕೋವಿಡ್ ಬರೋಬ್ಬರು 14 ಪ್ರಾಣ ಕಳೆದುಕೊಂಡಿದ್ದು, ಅಕ್ಷರಶಃ ಕೋಟೆನಾಡು ತಲ್ಲಣಗೊಂಡಿದೆ.

ಇನ್ನು ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ದೊರೆಯದೇ ಸೋಂಕಿತರು ಪರದಾಡುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಸೋಂಕಿತರ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆ ಸಂಬಂಧಿಕರು, ಕುಟುಂಬಸ್ಥರು ಆತಂಕ ಸೃಷ್ಟಿಸುತ್ತಿದೆ. ವೈದ್ಯರು ಶತ ಪ್ರಯತ್ನ ಮಾಡಿದರು ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಂಕಿಗೆ ಬಲಿಯಾದವರ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ಸೋಂಕಿನಿಂದ ಗುಣಮುಖರಾದ ಸಂಖ್ಯೆ ಏರಿಕೆ ಇದ್ದರು ಸಹ ಜಿಲ್ಲೆಯ ಜನರಿಗೆ ಕೋವಿಡ್ ತಲ್ಲಣ ಮಾತ್ರ ಕ್ಷಿಣಿಸಿಲ್ಲ. ಯುವಕರು, ಮಹಿಳೆಯರು, ವೃದ್ಧರು ಸೋಂಕಿಗೆ ತುತ್ತಾಗುತ್ತಲೆ ಇದ್ದಾರೆ.

591 ಜನ ಗುಣಮುಖ
ಜಿಲ್ಲೆಯಲ್ಲಿ ಕೋವಿಡ್‌ನಿಂದ 591 ಜನ ಗುಣಮುಖರಾಗಿದ್ದು, ಹೊಸದಾಗಿ 773 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಚಿಕಿತ್ಸೆ ಫಲಕಾರಿಯಾಗದೇ 14 ಜನ ಶುಕ್ರವಾರ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 28000 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 20545 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ಬಾಗಲಕೋಟೆ 217, ಬಾದಾಮಿ 30, ಜಮಖಂಡಿ 160, ಹುನಗುಂದ 151, ಮುಧೋಳ 150, ಬೀಳಗಿ 65 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೋವಿಡ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದ 1846 ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 588239 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 557793 ನೆಗಟಿವ್ ಪ್ರಕರಣ, ಹಾಗೂ 225 ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು 7230 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net