

ಉಡುಪಿ: ಮನೆಯಲ್ಲಿನ ಹಿರಿಯರ ಆರೋಗ್ಯದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜರುಗಿದ ಕೋವಿಡ್ ಜನಾಂದೋಲನ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋವಿಡ್‌ಗೆ ಪೂರ್ಣ ಪ್ರಮಾಣದ ಲಸಿಕೆ ಬರುವವರೆಗೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು ಮತ್ತು ಆಗಾಗ್ಗೆ ಸುರಕ್ಷಿತ ಕೈ ತೊಳೆಯುವ ವಿಧಾನಗಳನ್ನು ಅನುಸರಿಸಬೇಕು, ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಪ್ರತೀ ಮನೆಗೆ ಮಾಹಿತಿ ತಲುಪಿಸಲಾಗುವುದು. ಕುಟುಂಬವನ್ನು ಕೋವಿಡ್‌ನಿಂದ ರಕ್ಷಿಸುವುದು ಪ್ರತಿಯೊಬ್ಬ ಕುಟುಂಬ ಸದಸ್ಯನ ಜವಾಬ್ದಾರಿ. ರಾಜ್ಯದಲ್ಲೇ ಉಡುಪಿಯಲ್ಲಿ ಪ್ರಥಮ ಬಾರಿಗೆ ಜನಾಂದೋಲನ ನಡೆಸಲಾಗುತ್ತಿದೆ ಎಂದು ಜಿ. ಜಗದೀಶ್ ಹೇಳಿದರು.
ಅರೋಗ್ಯ ಇಲಾಖೆ ವತಿಯಿಂದ ಹೊರತಂದ ಕೋವಿಡ್ 19 ಮಾಹಿತಿ ಕುರಿತ ಸ್ಟಿಕರ್ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ನ್ಯಾಯಾಧೀಶರಾದ ವಿವೇಕಾನಂದ ಎಸ್ ಪಂಡಿತ್, ಲಾವಣ್ಯ, ಭವಾನಿ, ಶೋಭಾ, ಮಂಜುನಾಥ್, ಮಹಾಂತೇಶ್ ಬೂಸಗೋಳ, ನಿರ್ಮಲಾ, ಪೋಕ್ಸೋ ನ್ಯಾಯಾಲಯ ನ್ಯಾಯಧೀಶರಾದ ಯಾದವ ವನಮಾಲಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಡಾ.ಪ್ರೇಮಾನಂದ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮ್ ಸಾಗರ್, ವಕೀಲರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಸರ್ಕಾರಿ ಅಭಿಯೋಜಕಿ ಶಾಂತಾ ಬಾಯಿ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಸ್ವಾಗತಿಸಿದರು, ನ್ಯಾಯಾಧೀಶ ಇರ್ಫಾನ್ ವಂದಿಸಿದರು.
ನ್ಯಾಯಾಧೀಶರಿಂದ ಚಾಲನೆ
ಜಿಲ್ಲೆಯಲ್ಲಿನ ಕೋವಿಡ್ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನ್ಯಾಯಾಂಗ ಇಲಾಖೆ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ವಕೀಲರ ಸಂಘ ಆಶ್ರಯದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ, ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಚಾಲನೆ ನೀಡಿದರು.