

ಭರತ್ ಶೆಟ್ಟಿಗಾರ್, ಮಂಗಳೂರು
ಕಡಬ ತಾಲೂಕಿನ ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಿಬಾಗಿಲು ಗ್ರಾಮದಲ್ಲಿ ಮಂಗಳವಾರ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ, ದ.ಕ.ಜಿಲ್ಲೆಯ ಏಕೈಕ ಸೋಂಕುಮುಕ್ತ ಗ್ರಾಮ ಎಂಬ ಹಣೆಪಟ್ಟಿ ಕಳಚಿಕೊಂಡಿದೆ.
ಎರಡನೇ ಅಲೆಯಲ್ಲಿ(ಎರಡು ತಿಂಗಳ ಅವಧಿ) ಒಂದು ಪಾಸಿಟಿವ್ ಪ್ರಕರಣವೂ ಇಲ್ಲದೆ, ಈ ಗ್ರಾಮ ಜಿಲ್ಲಾಡಳಿತದ ಮೆಚ್ಚುಗೆ ಗಳಿಸಿತ್ತು. ಒಂದು ಚಿಕ್ಕ ತಪ್ಪಿನಿಂದಾಗಿ ಶಿರಿಬಾಗಿಲು ತನ್ನ ಸ್ಥಾನ ಕಳೆದುಕೊಳ್ಳುವಂತಾಗಿದೆ.
ಬೇರೆ ಗ್ರಾಮದಿಂದ ಇತ್ತೀಚೆಗೆ ಇಲ್ಲಿಗೆ ಮದುವೆಯಾಗಿ ಬಂದಿದ್ದ ಯುವತಿಗೆ ಕರೊನಾ ದೃಢಪಟ್ಟಿದೆ. ಆದರೆ ಆಕೆ ಸದ್ಯ ಈ ಗ್ರಾಮದಲ್ಲಿ ವಾಸವಾಗಿಲ್ಲ, ಬದಲಾಗಿ ತಾಯಿಯ ಮನೆಯಲ್ಲೇ ಇದ್ದಾರೆ. ಮದುವೆ ಬಳಿಕ ನೌಕರಿಗೆ ರಜೆ ಹಾಕಿದ್ದ ಅವರು, ಮತ್ತೆ ಕೆಲಸಕ್ಕೆ ಹಾಜರಾಗುವ ಮುನ್ನ ಕರೊನಾ ಪರೀಕ್ಷೆ ಮಾಡಿಸಿದ್ದರು. ಈ ವೇಳೆ ವರದಿ ಪಾಸಿಟಿವ್ ಬಂದಿದೆ. ಟೆಸ್ಟ್‌ಗಾಗಿ ನೋಂದಣಿ ಮಾಡುವಾಗ ಆಕೆ ಗಂಡನ ಮನೆಯ ವಿಳಾಸ ನೀಡಿದ್ದರು, ಹೀಗಾಗಿ ಶಿರಿಬಾಗಿಲು ಕೂಡ ಸೋಂಕುಪೀಡಿತ ಗ್ರಾಮಗಳ ಸಾಲಿಗೆ ಸೇರಿತು. ಆದರೆ, ಗ್ರಾಮದಲ್ಲಿ ಯಾರಿಗೂ ಪಾಸಿಟಿವ್ ಇಲ್ಲ.
ಘಟ್ಟದ ತಪ್ಪಲು ಗ್ರಾಮ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಶಿರಿಬಾಗಿಲು ಗ್ರಾಮ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ. ಇಲ್ಲಿ 165 ಕುಟುಂಬಗಳಿದ್ದು, 872 ಮಂದಿ ವಾಸವಾಗಿದ್ದಾರೆ. ಗ್ರಾಮದ ಎಲ್ಲರ ವರದಿಯೂ ಕೋವಿಡ್ ನೆಗೆಟಿವ್ ಇದೆ. ಗ್ರಾಮದ ಜನರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಪಾಸಿಟಿವ್ ಪ್ರಕರಣಗಳಿರುವ ಸಮೀಪದ ಪಟ್ಟಣಗಳನ್ನು ಆಶ್ರಯಿಸಿದ್ದಾರೆ. ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸ್, ಕೈ ತೊಳೆಯುವುದು ಮೊದಲಾದ ಸರ್ಕಾರದ ಮಾರ್ಗಸೂಚಿಯನ್ನು ನಿರಂತರವಾಗಿ ಪಾಲಿಸುತ್ತಿದ್ದಾರೆ. ಇಲ್ಲಿಯವರೆಗೆ ಗ್ರಾಮಕ್ಕೆ ಸೋಂಕು ಕಾಲಿಟ್ಟಿಲ್ಲ. ಕಾರ್ಯಪಡೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಆಡಳಿತ ಮಂಡಳಿಯೂ ಕೋವಿಡ್ ಜಾಗೃತಿ ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ ಎನ್ನುತ್ತಾರೆ ಪಿಡಿಒ ರಾಘವೇಂದ್ರ ಗೌಡ.
ಮೊದಲ ಅಲೆಯಲ್ಲಿ ಇತ್ತು: ಕಳೆದ ವರ್ಷದ ಕರೊನಾ ಮೊದಲ ಅಲೆಯಲ್ಲಿ ಗ್ರಾಮದಲ್ಲಿ 4-5 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೆಲವರು ಊರಿಗೆ ಮರಳಿದ್ದರಿಂದ ಈ ಪ್ರಕರಣಗಳು ಕಾಣಿಸಿಕೊಂಡಿದ್ದವು. ಆದರೆ ಊರವರು ಎಚ್ಚರಿಕೆ ವಹಿಸಿದ್ದರಿಂದ ವ್ಯಾಪಕವಾಗಲಿಲ್ಲ.
ದ.ಕ.ಜಿಲ್ಲೆಯಲ್ಲಿ ಶಿರಿಬಾಗಿಲು ಕರೊನಾಮುಕ್ತ ಗ್ರಾಮವಾಗಿತ್ತು. ಹೊಸ ಪ್ರಕರಣದ ಮಾಹಿತಿ ಇಲ್ಲ, ಪಿಡಿಒರಿಂದ ಮಾಹಿತಿ ಪಡೆಯುತ್ತೇನೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಪಂನ ಎಳನೀರು ಎಂಬಲ್ಲಿಯೂ ಪಾಸಿಟಿವ್ ಪ್ರಕರಣಗಳಿಲ್ಲ ಎನ್ನುವ ವರದಿಗಳಿವೆ, ಅದರ ವ್ಯಾಪ್ತಿ ಚಿಕ್ಕದು, ಹಾಗಾಗಿ ಗ್ರಾಮ ಎಂದು ಕರೆಯಲು ಆಗುವುದಿಲ್ಲ.
ಡಾ.ಕುಮಾರ, ಸಿಇಒ, ದ.ಕ.ಜಿಪಂ
ಸೋಮವಾರದವರೆಗೂ ಶಿರಿಬಾಗಿಲು ಜಿಲ್ಲೆಯ ಕೋವಿಡ್ ರಹಿತ ಗ್ರಾಮವಾಗಿತ್ತು. ಆದರೆ ಮಂಗಳವಾರ ಈ ಪಟ್ಟ ಕಳಚಿಕೊಂಡಿದೆ. ಸೋಂಕಿತೆಯೊಬ್ಬರು ಈ ಗ್ರಾಮದ ವಿಳಾಸ ನೀಡಿರುವುದರಿಂದ, ಶಿರಿಬಾಗಿಲು ಪಾಸಿಟಿವ್ ಗ್ರಾಮಗಳ ಪಟ್ಟಿಯಲ್ಲಿ ಸೇರಿದೆ. ಆಕೆ ಈ ಗ್ರಾಮದಲ್ಲಿ ನೆಲೆಸಿಲ್ಲ. ಗ್ರಾಮದಲ್ಲಿ ಈವರೆಗೂ ಪಾಸಿಟಿವ್ ಪ್ರಕರಣವಿಲ್ಲ.
ರಾಘವೇಂದ್ರ ಗೌಡ, ಪಿಡಿಒ, ಕೊಂಬಾರು ಗ್ರಾಪಂ