

ಕುಂದಾಪುರ: ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಲು ಮತ್ತು ಕೊಲ್ಲೂರು ಲಲಿತಾಂಬಿಕಾ ಗೆಸ್ಟ್‌ಹೌಸನ್ನು 100 ಬೆಡ್‌ಗಳ ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕುಂದಾಪುರಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ತಾಲೂಕು ಆಸ್ಪತ್ರೆ ಕೋಟಕ್ಕೆ ಸ್ಥಳಾಂತರಗೊಳ್ಳಲಿದೆ. ಗರ್ಭಿಣಿಯರು, ಬಾಣಂತಿಯರನ್ನು ಕೋಟಕ್ಕೆ ಸ್ಥಳಾಂತರಿಸಲಾಗುವುದು. ಹೊರರೋಗಿಗಳ ವಿಭಾಗಕ್ಕೆ ಹಳೇ ವಿನಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ 400 ಬೆಡ್‌ಗಳ ಅವಶ್ಯಕತೆ ಇದೆ. ಈಗಾಗಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ 120 ಬೆಡ್, ಆದರ್ಶ ಆಸ್ಪತ್ರೆಯಲ್ಲಿ 60 ಬೆಡ್‌ಗಳ ವ್ಯವಸ್ಥೆ ಇದೆ. ಇನ್ನು ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚುವರಿ 100 ಹಾಗೂ ಕೊಲ್ಲೂರಿನಲ್ಲಿ 100 ಬೆಡ್ ಸಿಗಲಿದೆ ಎಂದು ತಿಳಿಸಿದರು.
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ 2500ಕ್ಕೂ ಹೆಚ್ಚು ಜನ ಮಹಾರಾಷ್ಟ್ರದಿಂದ ಬಂದಿದ್ದು, ಹೆಚ್ಚು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ರೋಗ ಲಕ್ಷಣ ಇಲ್ಲದವರಿಗೆ ಕುಂದಾಪುರ ಮತ್ತು ಕೊಲ್ಲೂರಲ್ಲಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆ ಅಗತ್ಯ ಇರುವವರು, ಗರ್ಭಿಣಿಯರನ್ನು ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದರು.
ಮಹಾರಾಷ್ಟ್ರ ಹಾಗೂ ಇತರೆ ರಾಜ್ಯದಿಂದ ಬಂದವರು ಟೆಸ್ಟ್ ರಿಪೋರ್ಟ್ ಬರುವ ತನಕ ಮನೆಯಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರೊಂದಿಗೆ ಬೆರೆಯಬಾರದು. ನೆಗೆಟಿವ್ ಎಂದು ಬರುವ ತನಕ ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹಾಯಕ ಆಯುಕ್ತ ಕೆ.ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಇದ್ದರು.
ಲ್ಯಾಬ್ ಕೊರತೆಯಿಂದ ವರದಿ ವಿಳಂಬ: ಹೊರ ದೇಶ, ಹೊರರಾಜ್ಯಗಳಿಂದ ಜಿಲ್ಲೆಗೆ 8400 ಜನ ಬಂದಿದ್ದಾರೆ. ಅವರಲ್ಲಿ 7 ಮತ್ತು 14 ದಿನ ಕ್ವಾರಂಟೈನ್ ಮುಗಿಸಿದವರನ್ನು ಮನೆಗೆ ಕಳುಹಿಸಲಾಗಿದೆ. ಕ್ವಾರಂಟೈನ್‌ನಲ್ಲಿರುವಾಗಲೇ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಪ್ರಯೋಗಾಲಯಗಳ ಕೊರತೆಯಿಂದಾಗಿ ಫಲಿತಾಂಶ ವಿಳಂಬವಾಗಿದ್ದು, ಈಗ ಪಾಸಿಟಿವ್ ಬಂದವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು. ಸೋಂಕಿತರು ಮತ್ತು ಅವರ ಪಕ್ಕದ ಮನೆಗಳಿರುವ ಕಂಟೇನ್ಮೆಂಟ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಅಲ್ಲಿನವರು ಹೊರಗೆ, ಹೊರಗಿನವರು ಅಲ್ಲಿಗೆ ಹೋಗುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜನ ಸಹಕರಿಸಬೇಕು, ಸಮುದಾಯಕ್ಕೆ ಹರಡುವುದು ತಡೆಯಬೇಕು ಎಂದರು.