

ಮಂಗಳೂರು: ಉಡುಪಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ದಾಖಲೆ ಸಂಖ್ಯೆಯಲ್ಲಿ ದೈನಂದಿನ ಸೋಂಕಿತರು ಹಾಗೂ ಸಾವಿನ ಅಂಕಿ ಅಂಶ ಬಿಡುಗಡೆಯಾಗಿದೆ.
ಒಂದೇ ದಿನ ಜಿಲ್ಲೆಯಲ್ಲಿ 1006 ಜನರಲ್ಲಿ ಸೋಂಕು ದೃಢಪಟ್ಟಿದ್ದು, 15 ಮಂದಿ ಮೃತಪಟ್ಟಿದ್ದಾರೆ. ದೈನಂದಿನ ಸೋಂಕಿನ ಪ್ರಮಾಣ ಶೇ. 10.7 ಕ್ಕೆ ಏರಿಕೆಯಾಗಿದೆ. ಈ ದಿನ ಅತ್ಯಧಿಕ ದೈನಂದಿನ ಸೋಂಕಿತರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇಂದು ಎರಡು ಜಿಲ್ಲೆಗಳಲ್ಲಿ ಮಾತ್ರ ಹೊಸ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಬೆಂಗಳೂರು ನಗರದಲ್ಲಿ 1100 ಪ್ರಕರಣ ದಾಖಲಾಗಿದ್ದರೆ, ದಕ ಎರಡನೇ ಸ್ಥಾನದಲ್ಲಿದೆ.
ಮೇ 16ರಂದು 1787 ಪ್ರಕರಣ ವರದಿಯಾಗಿತ್ತು. ಅದರ ನಂತರ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿರುವುದು ಇದೇ ಮೊದಲು. ಸೋಂಕಿತರಲ್ಲಿ ಒಂದೇ ದಿನ 15 ಸಾವು ಕೂಡ ಹೊಸ ದಾಖಲೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 87,350. ಶುಕ್ರವಾರ 665 ಮಂದಿ ಸೋಂಕುಮುಕ್ತರಾಗಿದ್ದು, ಗುಣವಾದವರ ಒಟ್ಟು ಸಂಖ್ಯೆ 79,395. ಸೋಂಕಿತರಲ್ಲಿ ಒಟ್ಟು 1024 ಮಂದಿ ಮೃತಪಟ್ಟಿದ್ದಾರೆ.. 6,931 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
23 ಕಂಟೇನ್ಮೆಂಟ್ ವಲಯ: ಜಿಲ್ಲೆಯಲ್ಲಿ ಒಂದೇ ಕಡೆ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾದ 23 ಕಡೆ ಕಂಟೇನ್ಮೆಂಟ್ ಜೋನ್‌ಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಇವುಗಳಲ್ಲಿ ಮಂಗಳೂರಿನಲ್ಲಿ 7, ಬೆಳ್ತಂಗಡಿಯಲ್ಲಿ 8, ಪುತ್ತೂರು ಮತ್ತು ಸುಳ್ಯದಲ್ಲಿ ತಲಾ 2 ಮತ್ತು ಬಂಟ್ವಾಳದಲ್ಲಿ 4 ಇವೆ.
ಜನರು ಆತಂಕಪಡಬೇಕಿಲ್ಲ. ಆದರೆ ಕರೊನಾ ಬಗ್ಗೆ ಅತ್ಯಂತ ಎಚ್ಚರ ವಹಿಸಬೇಕು. ಕೋವಿಡ್ ಒಮ್ಮೆಲೇ ದೂರವಾಗುವುದಿಲ್ಲ. ಹಿಂದೆ ದಿನಕ್ಕೆ 3,500 ಪರೀಕ್ಷೆ ಮಾಡಲಾಗುತ್ತಿತ್ತು, ಈಗ ದಿನಕ್ಕೆ 10,000 ಜನರ ಪರೀಕ್ಷೆ ನಡೆಸಲಾಗುತ್ತದೆ. ಆದ್ದರಿಂದ ದೈನಂದಿನ ಸೋಂಕಿತರ ಸಂಖ್ಯೆ ಅಧಿಕ ಕಾಣುತ್ತದೆ.
- ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದ.ಕ.
ಉಡುಪಿಯಲ್ಲಿ 188 ಮಂದಿಗೆ ದೃಢ: ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 188 ಮಂದಿಗೆ ಕರೊನಾ ದೃಢಪಟ್ಟಿದೆ. ಉಡುಪಿ ತಾಲೂಕಿನ 71 ಹಾಗೂ 70 ವರ್ಷದ ಇಬ್ಬರು ಮಹಿಳೆಯರು, ಕುಂದಾಪುರದ 73 ವರ್ಷದ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 90 ಮಂದಿ ಉಡುಪಿ, 47 ಮಂದಿ ಕುಂದಾಪುರ, 47 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. 4 ಮಂದಿ ಹೊರ ಜಿಲ್ಲೆಯವರು. ಇವರಲ್ಲಿ 52 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 14 ಮಂದಿ ಕೋವಿಡ್ ಅಸ್ಪತ್ರೆಯಲ್ಲಿ ಹಾಗೂ 174 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 330 ಮಂದಿ ಗುಣವಾಗಿದ್ದಾರೆ. 2167 ಸಕ್ರಿಯ ಪ್ರಕರಣಗಳಿವೆ.